ಪ್ರಾಮಾಣಿಕತೆಯ ಜೊತೆ ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಿದರೆ ಜನರ ಪ್ರೀತಿ ಗಳಿಸಲು ಸಾಧ್ಯ: ಅನಿಲ್ ಕುಲಕರ್ಣಿ
.jpg)
ಉಪ್ಪಿನಂಗಡಿ, ಅ.15: ಸರಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯ ಮೂಲಕ ಇಚ್ಛಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿಯೊಂದಿಗೆ ಜನರ ಪ್ರೀತಿ- ವಿಶ್ವಾಸ ಗಳಿಸಲು ಸಾಧ್ಯ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ ತಿಳಿಸಿದರು.
ಉಪ್ಪಿನಂಗಡಿ ಸಬ್‌ಇನ್ಸ್‌ಪೆಕ್ಟರ್ ಆಗಿದ್ದು, ಇದೀಗ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಹೊಂದಿ ವರ್ಗಾವಣೆ ಹೊಂದಿರುವ ತಿಮ್ಮಪ್ಪ ನಾಯ್ಕಿ ಮತ್ತು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದು, ಇದೀಗ ವರ್ಗಾವಣೆ ಹೊಂದಿರುವ ಡಾ. ಶಶಿಕಲಾ ಅವರಿಗೆ ಉಪ್ಪಿನಂಗಡಿಯ ವರ್ತಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲಾ ಜಾತಿ, ಧರ್ಮದವರು ಪರಸ್ಪರ ಸೌಹಾರ್ದತೆಯಿಂದಿದ್ದರೂ, ಕೇವಲ ಒಂದಿಬ್ಬರಿಂದಾಗಿ ಸಮಾಜದ ಸೌಹಾರ್ದತೆಗೆ ಕಳಂಕ ಬಂದೊದಗುತ್ತದೆ. ಅಂತಹವರನ್ನು ಸಾಮೂಹಿಕವಾಗಿ ದೂರ ಮಾಡುವ ಪ್ರಯತ್ನವಾದಾಗ ಮಾತ್ರ ಎಲ್ಲವೂ ಸರಿಯಾಗಿರಲು ಸಾಧ್ಯ ಎಂದ ಅವರು, ಪೊಲೀಸರಿಗೆ ಸಾರ್ವಜನಿಕರ ಸಹಕಾರ ಸಿಕ್ಕಿದಾಗ ಮಾತ್ರ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯ ಎಂದರಲ್ಲದೆ, ವರ್ಗಾವಣೆಯಾಗಿ ತೆರಳುತ್ತಿರುವ ಇಬ್ಬರಿಗೂ ಶುಭ ಹಾರೈಸಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ರಘುನಾಥ ರೈ ಮಾತನಾಡಿ, ಇಂದಿನ ವ್ಯವಸ್ಥೆ ಅಡಿಯಲ್ಲಿ ಒಳ್ಳೆಯ ಅಧಿಕಾರಿ ಎಂದು ಹೆಸರು ಪಡೆದುಕೊಳ್ಳುವವರು ಬಹಳ ವಿರಳ, ಅಂತಹವರು ಇದ್ದರೆ ಅವರನ್ನು ಊರಿನಿಂದ ಕಳುಹಿಸಿಕೊಡುವಾಗ ಅವರನ್ನು ಗೌರವಿಸಿ ಕಳುಹಿಸುವುದು ಒಳ್ಳೆಯ ಸಂಪ್ರದಾಯ. ಹೀಗಾದಾಗ ಅವರಲ್ಲಿ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಇನ್ನೂ ಗಟ್ಟಿಯಾಗಲು ಸಾಧ್ಯ ಇದೆ ಎಂದರು.
ಸನ್ಮಾನ ಸ್ವೀಕರಿಸಿದ ಡಾ. ಶಶಿಕಲಾ ಮಾತನಾಡಿ, 11 ವರ್ಷಗಳ ಹಿಂದೆ ಇಲ್ಲಿಗೆ ಬರುವಾಗ ಬಹಳಷ್ಟು ಮಂದಿ ಉಪ್ಪಿನಂಗಡಿಗೆ ಹೋಗುತ್ತೀರಾ? ಎಂದು ಪ್ರಶ್ನಿಸಿದ್ದರು. ಆಗ ನನ್ನಲ್ಲಿ ಬಹಳಷ್ಟು ಗೊಂದಲ ಇತ್ತು. ಆದರೂ ಇದೊಂದು ಸವಾಲು ಎಂದು ಸ್ವೀಕರಿಸಿ ಇಲ್ಲಿಗೆ ಬಂದಿದ್ದೆ. ಆದರೆ 11 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ಎಲ್ಲರೂ ಮೆಚ್ಚಿ ಸಹಕಾರ ನೀಡಿದ್ದಾರೆ, ಇದಕ್ಕೆ ನಾನು ಅಭಾರಿ ಆಗಿದ್ದೇನೆ ಎಂದರು.
ಎಸ್ಸೈ ತಿಮ್ಮಪ್ಪ ನಾಯ್ಕ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಗುರುತಿಸುವುದು ತೀರಾ ಕಡಿಮೆ, ಏನಿದ್ದರೂ ಪೊಲೀಸ್ ಕೆಲಸದಲ್ಲಿ ಎಲ್ಲರನ್ನೂ ತೃಪ್ತಿಪಡಿಸುವುದು ಕಷ್ಟ. ಆದರೂ ಇಲ್ಲಿನ ಜನರ ಸಹಕಾರದಿಂದ 1 ವರ್ಷ 3 ತಿಂಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ ಎಂದ ಅವರು ಜನತೆಯ ಪ್ರೀತಿ ಆದರಗಳಿಗೆ ಅಬಾರಿ ಆಗಿರುವುದಾಗಿ ತಿಳಿಸಿದರು.
ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಉಪ್ಪಿನಂಗಡಿ ದೀನರ ಮಾತೆ ಚರ್ಚ್ ಧರ್ಮಗುರು ರೊನಾಲ್ಡ್ ಪಿಂಟೊ, ಓಸ್ವಾಲ್ಡ್ ಪಿಂಟೊ, ನೇತ್ರಾವತಿ ನದಿ ತಿರುವು ಹೋರಾಟ ಸಮಿತಿ ಸಂಚಾಲಕ ಡಾ. ನಿರಂಜನ ರೈ, ಡಾ. ರಾಜಾರಾಂ ಕೆ.ಬಿ., ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಪತ್ರಕರ್ತ ಉದಯಕುಮಾರ್, ಸಿದ್ದಿಕ್ ನೀರಾಜೆ, ಆರೋಗ್ಯ ಮಿತ್ರ ಸೌಮ್ಯ ಮಾತನಾಡಿದರು.
ಸಮಾರಂಭದಲ್ಲಿ ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಶುಕೂರ್ ಹಾಜಿ, ಉದ್ಯಮಿ ಯು. ರಾಮ, ಡಾ. ಸುಪ್ರೀತ್ ಲೋಬೊ, ಡಾ. ರಮ್ಯ ರಾಜಾರಾಂ, ಗ್ರಾಮ ಪಂಚಾಯತ್ ಸದಸ್ಯ ಯು.ಟಿ. ತೌಸೀಫ್ ಉಪಸ್ಥಿತರಿದ್ದರು.
ವರ್ತಕ ಸಂಘದ ಕೈಲಾರ್ ರಾಜ್‌ಗೋಪಾಲ್ ಸ್ವಾಗತಿಸಿದರು. ಝಕರಿಯಾ ಕೊಡಿಪ್ಪಾಡಿ ವಂದಿಸಿದರು. ಯು.ಜಿ. ರಾಧಾ, ಜಗದೀಶ್ ಶೆಟ್ಟಿ, ಯು.ಟಿ. ಇರ್ಷಾದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವರ್ತಕ ಸಂಘದ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.







