ತುಳುಭಾಷೆಯ ಶ್ರೀಮಂತಿಕೆ ಉಳಿಸುವ ಕಾರ್ಯ ಅಗತ್ಯ: ಪ್ರಮೋದ್

ಉಡುಪಿ, ಅ.15: ಇಂದಿನ ಯುವ ಸಮುದಾಯಕ್ಕೆ ಭಾಷೆ, ಸಂಸ್ಕೃತಿಗಿಂತ ಇಂಟರ್‌ನೆಟ್, ಮೊಬೈಲ್‌ಗಳಲ್ಲಿಯೇ ಹೆಚ್ಚಿನ ಆಸಕ್ತಿ. ಇದೇ ರೀತಿ ಮುಂದು ವರೆದರೆ ತುಳುಭಾಷೆಯಲ್ಲಿರುವ ಶ್ರೀಮಂತಿಕೆಯನ್ನು ಜೀವಂತವಾಗಿರಲು ಸಾಧ್ಯವಿಲ್ಲ. ಆದುದರಿಂದ ತುಳು ಭಾಷೆಯ ಶ್ರೀಮಂತಿಕೆಯನ್ನು ರಕ್ಷಿಸಿ ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ಅಗತ್ಯವಾಗಿ ಮಾಡಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉಡುಪಿ ತುಳು ಕೂಟ, ಉಡುಪಿ ಎಂಜಿಎಂ ಕಾಲೇಜು ತುಳು ಸಂಘ, ಉಡುಪಿ -ಇಂದ್ರಾಳಿ ಲಯನ್ಸ್ ಕ್ಲಬ್, ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ತುಳು ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ತುಳು ಮಿನದನ ಒಡಿಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತುಳು ಭಾಷೆಯಲ್ಲಿರುವ ಶ್ರೀಮಂತಿಕೆ, ಸಂಸ್ಕೃತಿಯು ಇನ್ನು ಯಾವುದೇ ಭಾಷೆಯಲ್ಲಿ ಇರಲು ಸಾಧ್ಯವಿಲ್ಲ. ಇಂದಿನ ತಲೆಮಾರಿಗೆ ತಮ್ಮ ಹಿರಿಯ ಆಸ್ತಿ ಬೇಕು. ಆದರೆ ಅವರ ಅನುಸರಿಸುತ್ತಿದ್ದ ಆಚರಣೆ, ಸಂಸ್ಕೃತಿ ಬೇಡವಾ ಗಿದೆ. ಈ ಮನೋಭಾವ ಬದಲಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮಾತನಾಡಿ, ಈ ವರ್ಷ ಎಂಟು ಕಡೆಗಳಲ್ಲಿ ಈ ರೀತಿಯ ಮಿನದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದ.ಕ. ಜಿಲ್ಲೆಯ 19 ಹಾಗೂ ಉಡುಪಿಯ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳು ತುಳು ಪಠ್ಯವನ್ನು ಕಲಿಯುತ್ತಿದ್ದಾರೆ. ಸಂಸ್ಕೃತಿ ಮತ್ತು ಭಾಷೆಯ ತಿಳುವಳಿಕೆ ಮಕ್ಕಳಿಗೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಾನಪದ ಚಿಂತಕ ಡಾ.ವೈ.ಎನ್.ಶೆಟ್ಟಿ ಮಾತನಾಡಿದರು. ಬಾಲಕಿ ಯರ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಪ್ರೌಢಶಾಲಾ ಮುಖ್ಯಸ್ಥ ವಿಶ್ವನಾಥ ಬಾಯರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ವೌಲ, ಎಂಜಿಎಂ ಕಾಲೇಜಿನ ಉಪನ್ಯಾಸಕ ಡಾ.ಪುತ್ತಿ ವಸಂತ ಕುಮಾರ್, ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು.
ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.







