ದೈನಂದಿನ ಬದುಕಿನ ಆಲೋಚನೆಗಳೇ ಜಾನಪದ ಕಲೆ: ಪ್ರೊ.ಕೆ.ಚಿನ್ನಪ್ಪಗೌಡ
ಸವಣೂರಿನಲ್ಲಿ ‘ಕಲಾರಶ್ಮಿ’ ರಾಜ್ಯ ಮಟ್ಟದ ಜಾನಪದ ಉತ್ಸವ

ಪುತ್ತೂರು, ಅ.15: ಈ ನೆಲದ ಕೃಷಿಯ, ಶ್ರಮದ, ದುಡಿಮೆಯ ಜನರ ದೈನಂದಿನ ಬದುಕಿನ ಆಲೋಚನೆಗಳ ಸಂಬಂಧವೇ ಜಾನಪದ ಕಲೆಯಾಗಿ ಹೊರಹೊಮ್ಮಿದೆ. ಅವರ ಆಲೋಚನೆಗಳನ್ನು ಪ್ರಕಟಪಡಿಸುವ ಒಂದು ಮಾಧ್ಯಮ ಜಾನಪದ ಕುಣಿತವಾಗಿದೆ. ಆದರೆ ಇಂದು ವ್ಯಾವಹಾರಿಕ ಬದುಕಿನಿಂದಾಗಿ ಕಲೆಯ ಪರಂಪರೆ ನಶಿಸಿ ಹೋಗುತ್ತಿದೆ. ಕಲೆಯನ್ನು ಕಳಕೊಂಡಿದ್ದೇವೆ ಎಂಬ ವಿಷಾದ ನಮ್ಮಲ್ಲಿದೆ ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಹೇಳಿದರು.
ಅವರು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಸವಣೂರು ಕಲಾರಶ್ಮಿ ಕರ್ನಾಟಕ ಜಾನಪದ ಉತ್ಸವ ಸಮಿತಿಯ ಆಶ್ರಯದಲ್ಲಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಅರೆಭಾಷೆ ಅಕಾಡೆಮಿ, ಹಾವೇರಿ ಜಾನಪದ ವಿಶ್ವವಿದ್ಯಾಲಯ, ಮಂಗಳೂರು ಯಕ್ಷಗಾನ ಅಧ್ಯಯನ ಪೀಠ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು ವಾರ್ತಾ ಮತ್ತು ಪ್ರಚಾರ ಇಲಾಖೆಯ ಪ್ರಾಯೋಜಕತ್ವದಲ್ಲಿ ಶನಿವಾರ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ ‘ಕಲಾರಶ್ಮಿ’ಕರ್ನಾಟಕ ಜಾನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಬೇಸಾಯ ಜಾನಪದ ಕಲೆಯ ಅಧ್ಯಯನ ಅತ್ಯಗತ್ಯ ಎಂದ ಅವರು ಬೇಸಾಯ ನಿಂತು ಹೋದ ಮೇಲೆ ಬೇಸಾಯದ ಹಿಂದೆ ಇರುವ ಜಾನಪದ ಕಲೆಯನ್ನು ಎಲ್ಲಿ ಹುಡುಕಬೇಕು, ಹೀಗಾಗಿ ಬೇರೆ ರೀತಿಯಲ್ಲಿ ಕಲೆಯನ್ನು ಉಳಿಸುವ ಪ್ರಯತ್ನಗಳು ಆಗಬೇಕಿದೆ. ಕರ್ನಾಟಕದ ಕಲೆಗಳನ್ನು ಕಂಡಿದ್ದೇವೆ ಎಂಬ ನೆನಪನ್ನು ಕಟ್ಟಿಕೊಡುವ ಕೆಲಸ, ಎಳೆಯ ಮನಸ್ಸುಗಳಿಗೆ ಸಾಂಸ್ಕೃತಿಕ ಮನಸ್ಸನ್ನು ಕಟ್ಟುವ ಕೆಲಸ ಇಲ್ಲಿ ನಡೆದ ಕಲಾರಶ್ಮಿಯಂತಹ ಕಾರ್ಯಕ್ರಮಗಳ ಮೂಲಕ ಆಗಬೇಕಿದೆ. ಇದು ಕಲೆಯನ್ನು ಉಳಿಸುವ ಕ್ರಮವೂ ಆಗಿದೆ ಎಂದು ಅವರು ಹೇಳಿದರು.
ಸಂಸದ ನಳಿನ್‌ಕುಮಾರ್ ಕಟೀಲು ಮಾತನಾಡಿ ಭಾರತೀಯ ಸಮಾಜ ಜನಜೀವನದ ಮಧ್ಯೆ ಕಲೆಗೆ ಪ್ರಾಧಾನ್ಯತೆ ನೀಡಿದೆ. ನಾಗರೀಕತೆಗಳಲ್ಲಿ ಭಾಷೆ ಉಗಮವಾಗುವುದಕ್ಕಿಂತ ಮುನ್ನ ಭಾರತದಲ್ಲಿ ಕಲೆ ಉಗಮವಾಗಿದೆ. ಭಾರತದ ಕಲೆ, ಸಂಸ್ಕೃತಿಗಳು ಇಲ್ಲಿನ ಜ್ಞಾನದ ಪ್ರತೀಕವಾಗಿದ್ದು, ಕಲೆಗಳು ಮನಸ್ಸನ್ನು ಅರಳಿಸುತ್ತವೆ. ಭರತ ಭೂಮಿಯಲ್ಲಿ ಕಲೆಯಲ್ಲೇ ಭಗವಂತನನ್ನು ಕಾಣಲು ಸಾಧ್ಯವಿದೆ ಎಂದರು.
ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸವಣೂರು ಕಲಾರಶ್ಮಿ ಕರ್ನಾಟಕ ಜಾನಪದ ಉತ್ಸವದಿಂದ ಸಮಾಜದ ಮರೆಯಲ್ಲಿರುವ ಜನಪದ ಕಲೆಗಳನ್ನು ಸಮಾಜಮುಖಿಯೆಡೆಗೆ ತರುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ಜನಪದ ಕಲೆಗಳು ಆಯಾ ಧರ್ಮ, ಜಾತಿಗೆ ಸೀಮೀತವಾಗಿದ್ದು, ಇದನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಸಾವಣೂರಿನ ಜನತೆಗೆ ಬಂದೊದಗಿದೆ ಎಂದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ಧನ್ ಧ್ವಜಾರೋಹಣಗೈದರು. ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ, ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ದೇವದಾಸ್ ಪೈ, ಪುತ್ತೂರು ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ., ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಅಶ್ವಿನ್ ಎಲ್.ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಮಿಥಾಲಿ ಬಿ.ಶೆಟ್ಟಿ, ಜೊತೆ ಕಾರ್ಯದರ್ಶಿ ಸೀತಾರಾಮ ಕೇವಳ, ಖಜಾಂಜಿ ಎನ್.ಸುಂದರ ರೈ ಸವಣೂರು ಉಪಸ್ಥಿತರಿದ್ದರು.
ಜಾನಪದ ಉತ್ಸವ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು, ಪ್ರದೀಪ್ ಕುಮಾರ್ ಪನ್ನ ಕಾರ್ಯಕ್ರಮ ನಿರೂಪಿಸಿದರು.







