ಎ.ಜೆ. ಆಸ್ಪತ್ರೆಯಲ್ಲಿ ‘ಹಾಸ್ಪಿಟಾಲೆಂಝ್’ ರಾಜ್ಯಮಟ್ಟದ ಅಂತರ್‌ಆಸ್ಪತ್ರೆ ಸಾಂಸ್ಕೃತಿಕ ಸ್ಪರ್ಧೆ

ಮಂಗಳೂರು, ಅ.15: ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಸೇವಾ ಕ್ಷೇತ್ರದಲ್ಲಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಲಾದ ‘ಹಾಸ್ಪಿಟಾಲೆಂಝ್’ ರಾಜ್ಯಮಟ್ಟದ ಅಂತರ್‌ಆಸ್ಪತ್ರೆ ಸಾಂಸ್ಕೃತಿಕ ಸ್ಪರ್ಧೆಯನ್ನು ಯೆನೆಪೊಯ ವಿಶ್ವವಿದ್ಯಾನಿಲಯದ ನಿರ್ದೇಶಕ ಮುಹಮ್ಮದ್ ಫರಾದ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯನ್ನು ಆಯೋಜಿಸುವುದು ಕಾಣಬಹುದು. ಆದರೆ, ಆಸ್ಪತ್ರೆಗಳ ಸಿಬ್ಬಂದಿಗಾಗಿ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಇದರಿಂದ ಸಿಬ್ಬಂದಿ ಇನ್ನಷ್ಟು ಪ್ರೇರಣೆಗೊಂಡು ಸಂಸ್ಥೆಯ ಬೆಳವಣಿಗೆಗೆ ಇನ್ನಷ್ಟು ಕೊಡುಗೆ ನೀಡಲು ಪ್ರೋತ್ಸಾಹ ದೊರಕಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿನಿಮಾ ನಟಿ ನೇಹಾ ಶೆಟ್ಟಿ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನಮ್ಮ ಆರೋಗ್ಯ ವ್ಯವಸ್ಥೆಯ ಬೆನ್ನುಹುರಿಗಳಿದ್ದಂತೆ. ಜನರ ದೈನಂದಿನ ಜೀವನದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಅಗತ್ಯವಾಗಿದ್ದು, ಪ್ರಮುಖ ಪಾತ್ರ ವಹಿಸುತ್ತಾರೆ. ಸೇವೆಯ ಹೊರತಾಗಿ ಸಿಬ್ಬಂದಿಯ ಪ್ರತಿಭಾ ಪ್ರದರ್ಶನಕ್ಕೆ ಈ ಸ್ಪರ್ಧೆಯ ಮೂಲಕ ಪೂರಕ ಅವಕಾಶ ಕಲ್ಪಿಸಿರುವುದು ಒಂದು ವಿಭಿನ್ನ ಯೋಚನೆ ಎಂದರು.
ಆಡಳಿತ ವಿಭಾಗದ ನಿರ್ದೇಶಕಿ ಡಾ.ಅಮಿತಾ ಪಿ. ಮಾರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೆಡಿಸಿನ್ ವಿಭಾಗದ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಸ್ವಾಗತಿಸಿ, ಸಿಬ್ಬಂದಿ ಲವಿಟಾ, ಪೂಜಾ ಜಯರಾಂ ಹಾಗೂ ದಿವ್ಯಾ ಶೆಟ್ಟಿ ನಿರೂಪಿಸಿದರು. ಸಹಾಯಕ ಎಚ್‌ಆರ್ ಮ್ಯಾನೇಜರ್ ಶಶಿಧರ ಆಚಾರ್ಯ ವಂದಿಸಿದರು.
ಉಡುಪಿಯ ಸಿಎಸ್‌ಐ ಲೊಂಬಾರ್ಡ್, ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆ, ಉಡುಪಿಯ ಸಿಟಿ ಆಸ್ಪತ್ರೆ, ಅತ್ತಾವರ ಕೆಎಂಸಿ ಆಸ್ಪತ್ರೆ, ಬೆಂಗಳೂರಿನ ಅಪೋಲೊ ಆಸ್ಪತ್ರೆ, ಉಡುಪಿಯ ಪ್ರಸಾದ್ ನೇತ್ರಾಲಯ, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.







