ನ್ಯಾಯಕ್ಕಾಗಿ ಕಾಯುವಿಕೆ! ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳೆಷ್ಟು ?

ಹೊಸದಿಲ್ಲಿ, ಅ.15: ಭಾರತದ ನ್ಯಾಯಾಂಗ ವ್ಯವಸ್ಥೆಯು ಪ್ರತಿ ದಿನ ಸುಮಾರು 2,600 ಪ್ರಕರಣಗಳನ್ನು ನಿರ್ವಹಿಸುತ್ತಿದೆ. ಆದರೆ, ನೂರು ಕೋಟಿಗೂ ಹೆಚ್ಚು ಜನರಿರುವ ದೇಶವೊಂದರಲ್ಲಿ ಸೃಷ್ಟಿಯಾಗುವ ಎಲ್ಲ ಪ್ರಕರಣಗಳನ್ನು ನಿರ್ವಹಿಸಲು ಈ ವೇಗ ಸಾಕಾಗದು. 2.2 ಕೋಟಿಗೂ ಹೆಚ್ಚು ಪ್ರಕರಣಗಳು ಪ್ರಕೃತ ಜಿಲ್ಲಾ ನ್ಯಾಯಾಲಯಗಳಲ್ಲೇ ಬಾಕಿಯುಳಿದಿವೆ. ಅವುಗಳಲ್ಲಿ 75 ಲಕ್ಷ ಸಿವಿಲ್ ಪ್ರಕರಣಗಳಿವೆ. ಅವುಗಳಲ್ಲೂ 60 ಲಕ್ಷಕ್ಕೂ ಹೆಚ್ಚು ಪ್ರಕರಣಗಳು 5 ವರ್ಷಗಳಿಗೂ ಮೀರಿ ಎಳೆಯಲ್ಪಟ್ಟಿವೆಯೆಂದು ಸರಕಾರದ ಅಂಕಿ-ಅಂಶಗಳು ತಿಳಿಸುತ್ತವೆ.
ಹಲವು ನ್ಯಾಯಾಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸ್ವಂತ ಕಟ್ಟಡಗಳನ್ನು ರಚಿಸುವ ಕುರಿತಾದ 5 ಸಾವಿರಕ್ಕೂ ಹೆಚ್ಚು ಪ್ರಸ್ತಾವಗಳು ರಾಜ್ಯ ಸರಕಾರಗಳ ಹಸಿರು ನಿಶಾನೆಗಾಗಿ ಕಾಯುತ್ತಿವೆ.
ಪ್ರತಿ 10 ಲಕ್ಷ ಜನರಿಗೆ ಸುಮಾರು 13 ನ್ಯಾಯಾಧೀಶರಿರುವ ಭಾರತದ ನ್ಯಾಯಾಂಗ ವ್ಯವಸ್ಥೆ, ಅದರ್ಶ ವ್ಯವಸ್ಥೆಯ ಹತ್ತಿರದಲ್ಲೂ ಇಲ್ಲ. ಉದಾಹರಣೆಗೆ- ಅಮೆರಿಕದಲ್ಲಿ 1980ರಷ್ಟು ಹಿಂದೆಯೇ 10 ಲಕ್ಷ ಜನರಿಗೆ 107 ನ್ಯಾಯಾಧೀಶರಿದ್ದರು. ರಾಜ್ಯವೊಂದರ ಸಾಕ್ಷರತೆ ಪ್ರಮಾಣ ಹಾಗೂ ಜಿಡಿಪಿ ಹೆಚ್ಚಿದಂತೆ, ವ್ಯಾಜ್ಯ ಹಾಗೂ ಮೊಕದ್ದಮೆಗಳ ಪ್ರಮಾಣವೂ ಹೆಚ್ಚುತ್ತದೆ. ಉದಾಹರಣೆಗೆ, ಶೇ.90ರಷ್ಟು ಸಾಕ್ಷರೆಂದು ಪ್ರಮಾಣವಿರುವ ಕೇರಳದಲ್ಲಿ ಪ್ರತಿ ವರ್ಷ, ಪ್ರತಿ 1 ಸಾವಿರ ಜನಕ್ಕೆ 28ರಂತೆ ಹೊಸ ಪ್ರಕರಣಗಳು ದಾಖಲಾಗುತ್ತಿದ್ದರೆ, ಶೇ.53ರಷ್ಟು ಸಾಕ್ಷರ ರಾಜ್ಯವಾಗಿರುವ ಜಾರ್ಖಂಡ್‌ನಲ್ಲಿ ತಲಾ 1,000 ಜನರಿಗೆ 4ರಂತೆ ಖಟ್ಲೆಗಳು ದಾಖಲಾಗುತ್ತಿವೆ.
ಕಳೆದ 3 ದಶಕಗಳಲ್ಲಿ ನ್ಯಾಯಾಧೀಶರ ಸಂಖ್ಯೆ 6 ಪಟ್ಟು ಹೆಚ್ಚಿದ್ದರೆ ಪ್ರಕರಣಗಳ ಸಂಖ್ಯೆ 12 ಪಟ್ಟು ಏರಿದೆಯೆಂದು 2012ರ ರಾಷ್ಟ್ರೀಯ ನ್ಯಾಯಾಲಯ ಪ್ರಬಂಧನ ವ್ಯವಸ್ಥೆಯ ವರದಿ ತಿಳಿಸಿದೆ. ಮುಂದಿನ 3 ದಶಕಗಳಲ್ಲಿ ಪ್ರತಿ ಸಾವಿರ ಜನರಿಗೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಈಗಿನ 15ರಿಂದ ಸುಮಾರು 75ಕ್ಕೇರಲಿದೆಯೆಂದು ಅದು ಅಂದಾಜಿಸಿದೆ.







