ಶವ ಪರೀಕ್ಷಾ ವರದಿಯಿಲ್ಲದೆ ಜೈನ ಬಾಲಕಿಯ ಸಾವಿನ ತನಿಖೆಗೆ ಅಡ್ಡಿ

ಹೈದರಬಾದ್, ಅ.15: ಜೈನ ಸಂಪ್ರದಾಯದಂತೆ 68 ದಿನಗಳ ಕಾಲ ಉಪವಾಸ ನಡೆಸಿ ಅ.13ರಂದು ಕೊನೆಯುಸಿರೆಳೆದಿದ್ದ 13ರ ಹರೆಯದ ಬಾಲಕಿಯೊಬ್ಬಳ ಸಾವಿನ ತನಿಖೆ ಹಳ್ಳ ಹಿಡಿದಿದೆ. ಭೌತಿಕ ಸುಳಿವು ಅಥವಾ ಮರಣೋತ್ತರ ಪರೀಕ್ಷಾ ವರದಿಯಿಲ್ಲದೆ ತನಿಖೆಯನ್ನು ಮುಂದುವರಿಸಲು ಸಾಧ್ಯವಿಲ್ಲವೆಂದು ಹೈದರಾಬಾದ್ ಪೊಲೀಸರು ಹೇಳುತ್ತಿದ್ದಾರೆ.
ಜೈನರ ‘ತಪಸ್ಯಾ’ ವ್ರತದ ಬಳಿಕ ಅಸುನೀಗಿದ್ದ ಆರಾಧನಾ ಸಮ್ದಾರಿಯಾ ಎಂಬ ಈ ಬಾಲಕಿಯ ಅಂತ್ಯಕ್ರಿಯೆಯನ್ನು ಕೇವಲ ಒಂದು ತಾಸಿನೊಳಗೆ ತರಾತುರಿಯಲ್ಲಿ ನಡೆಸಲಾಗಿದೆ. ಅದಾಗಿ 6 ದಿನಗಳ ಬಳಿಕ ಮಕ್ಕಳ ಹಕ್ಕು ಸಂಘಟನೆಗಳು ದೂರು ನೀಡಿದ್ದವು. ಅನಂತರ ಪೊಲೀಸ್ ಪ್ರಕರಣ ದಾಖಲಿಸಲಾಗಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮರಣೊತ್ತರ ಪರೀಕ್ಷೆ ನಡೆಸುವ ಯಾವ ಸಾಧ್ಯತೆಯೂ ಇಲ್ಲವಾಗಿದೆ. ಆದುದರಿಂದ ಬಾಲಕಿಯ ಸಾವಿನ ಕಾರಣವನ್ನು ಖಚಿತಪಡಿಸುವುದು ತಮಗೆ ಕಷ್ಟವಾಗಿದೆಯೆಂದು ಸಿಕಂದರಾಬಾದ್‌ನ ಮಾರುಕಟ್ಟೆ ಠಾಣಾ ಪೊಲೀಸ್ ನಿರೀಕ್ಷಕ ಎಂ.ಮಟ್ಟಯ್ಯ ‘ಹಿಂದೂಸ್ಥಾನ್ ಟೈಮ್ಸ್’ಗೆ ಹೇಳಿದ್ದಾರೆ. ಆದಾಗ್ಯೂ, ಬಾಲಕಿಯ ಹೆತ್ತವರನ್ನು ಬಂಧಿಸುವಂತೆ ಆಗ್ರಹ ಹೆಚ್ಚಾಗಿರುವ ಹೊರತಾಗಿಯೂ ಅವರ ಬಂಧನದ ಸಾಧ್ಯತೆಯನ್ನು ಪೊಲೀಸ್ ಅಧಿಕಾರಿ ತಳ್ಳಿ ಹಾಕಿದ್ದಾರೆ.





