ಕೃಷಿ ಮೇಳಗಳಿಂದ ಕೃಷಿಕರಲ್ಲಿ ಧೈರ್ಯ ತುಂಬಲು ಸಾಧ್ಯ: ಪ್ರಮೋದ್

ಬ್ರಹ್ಮಾವರ, ಅ.15: ವಿವಿಧ ಕಾರಣಗಳಿಗಾಗಿ ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಜನರಿಂದ ತುಂಬಿ ತುಳುಕುವ ಇಂಥ ಕೃಷಿ ಮೇಳಗಳಿಂದ ದೈರ್ಯ ತುಂಬಲು ಸಾಧ್ಯವಿದೆ. ಅವರಲ್ಲಿ ಮತ್ತೆ ಕೃಷಿಯ ಕುರಿತಂತೆ ವಿಶ್ವಾಸ ಮೂಡಿಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ, ಬ್ರಹ್ಮಾವರ ಮತ್ತು ಉಳ್ಳಾಲದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ, ಕೊಚ್ಚಿನ್‌ನ ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಮಂಗಳೂರಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ‘ಕೃಷಿ ಮೇಳ-2016’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಒಂದು ಕಾಲದಲ್ಲಿ ಜಿಲ್ಲೆಯ ಎಲ್ಲಾ ಗದ್ದೆಗಳು ಹಸಿರುಮಯವಾಗಿದ್ದವು. ಆದರೆ ಇಂದು ಗದ್ದೆಗಳು ಹಡೀಲು ಬಿದ್ದಿರುವುದನ್ನು ಕಾಣುತ್ತಿದ್ದೇವೆ. ಗದ್ದೆಗಳೆಲ್ಲವೂ ಮನೆನಿವೇಶನಗಳಾಗಿ ಪರಿರ್ವತನೆಗೊಂಡಿವೆ. ಇದಕ್ಕೆ ಜನಸಂಖ್ಯಾ ಸ್ಫೋಟದೊಂದಿಗೆ ಜನರ ಬದಲಾದ ಆಹಾರ ಪದ್ಧತಿಯೂ ಕಾರಣವಾಗಿರ ಬಹುದು ಎಂದವರು ಅಭಿಪ್ರಾಯಪಟ್ಟರು.
ಕೃಷಿ ಲಾಭದಾಯಕವಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯದೊಂದಿಗೆ, ರೈತರಲ್ಲಿ ಹಿಂದಿದ್ದ ಛಲ, ಆತ್ಮವಿಶ್ವಾಸದ ಕೊರತೆ, ಯುವಜನಾಂಗ ಕೃಷಿಯಿಂದ ವಿಮುಖಗೊಂಡಿರುವುದೂ ಜಿಲ್ಲೆಯಲ್ಲಿ ಕೃಷಿಯ ಹಿನ್ನಡೆಗೆ ಕಾರಣವೆನ್ನ ಬಹುದು. ಇಂಥ ಸ್ಥಿತಿಯಲ್ಲಿ ಕೃಷಿ ಈಗಲೂ ಲಾಭದಾಯಕ ಎಂಬುದನ್ನು ರೈತರಿಗೆ ಮನದಟ್ಟು ಮಾಡುವ ಜವಾಬ್ದಾರಿ ವಿವಿಧ ಇಲಾಖೆಗಳು, ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಮೇಲಿದೆ ಎಂದು ಪ್ರಮೋದ್ ಹೇಳಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಮುಂತಾದ ಇಲಾಖೆಗಳು ಸೇರಿ ಸಮಗ್ರ ಕೃಷಿ ಯಾವ ರೀತಿ ರೈತರಿಗೆ ಲಾಭದಾಯಕ ಎಂಬುದನ್ನು ರೈತರಿಗೆ ಮನದಟ್ಟುಮಾಡಿಕೊಡಬೇಕಾಗಿದೆ. ಅಧಿಕ ಇಳುವರಿ ಕೊಡುವ ತಳಿಗಳನ್ನು ಸಂಶೋಧಕರು ಕಂಡುಹಿಡಿದು ರೈತರಿಗೆ ಮುಟ್ಟಿಸಬೇಕಾಗಿದೆ ಎಂದರು.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ, ಉತ್ತಮ ಬೀಜಗಳ ಬಳಕೆ, ಗದ್ದೆಯ ಮಣ್ಣಿನ ಪರೀಕ್ಷೆ ಮಾಡಿ ಸೂಕ್ತ ಗೊಬ್ಬರ ಹಾಗೂ ಸೂಕ್ತ ಬೀಜದ ಬಗ್ಗೆ ರೈತನಿಗೆ ಮಾಹಿತಿ ನೀಡಿದರೆ ಖಂಡಿತ ಕೃಷಿ ಲಾಭದಾಯಕವಾಗಲು ಸಾಧ್ಯವಿದೆ. ಇವುಗಳಿಗೆ ರೈತರು ಸಹ ಸೂಕ್ತವಾಗಿ ಸ್ಪಂದಿಸಬೇಕಿದೆ ಎಂದು ಸಚಿವರು ನುಡಿದರು.
ಕೇಂದ್ರದ ನೂತನ ಹೊರಾಂಗಣ ವೇದಿಕೆಯನ್ನು ಉದ್ಘಾಟಿಸಿದ ಮಣಿಪಾಲ ಬಿವಿಟಿಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ.ಉಡುಪ ಮಾತನಾಡಿ, ಸರಕಾರ ಕೃಷಿಗೆ, ರೈತ ಬೆಳೆದ ಉತ್ಪನ್ನಗಳಿಗೆ ಒಳ್ಳೆಯ ಧಾರಣೆಯನ್ನು ನೀಡಿದರೆ, ನಾಳೆಯೇ ಎಲ್ಲಾ ರೈತರು ಮತ್ತೆ ಉತ್ಸಾಹದಲ್ಲಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಿದ್ಧರಾಗುತ್ತಾರೆ ಎಂದರು.
ಜಿಲ್ಲೆಯಲ್ಲಿ ಇಂದು ಹೈನುಗಾರಿಕೆ ಅತ್ಯಂತ ಲಾಭದಾಯಕವಾಗಿದೆ. ಇಂದು ಜಿಲ್ಲೆಯಲ್ಲಿ 3.75ಲಕ್ಷ ಲೀ. ಹಾಲು ಪ್ರತಿದಿನ ಉತ್ಪಾದನೆಯಾಗುತ್ತಿದೆ. ಹೀಗಾಗಿ ರೈತರು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ, ಕೋಳಿಸಾಕಣೆ, ತೋಟಗಾರಿಕಾ ಬೆಳೆಗಳನ್ನು ಬೆಳೆದರೆ ಕೃಷಿ ಖಂಡಿತ ಲಾಭದಾಯಕವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ಕುಲಪತಿಗಳಾದ ಡಾ.ಸಿ.ವಾಸುದೇವಪ್ಪ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವೆಬ್‌ಸೈಟ್‌ನ್ನು ಉದ್ಘಾಟಿಸಿದರು. ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಸಮಗ್ರ ಕೃಷಿ ಘಟಕಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ತಾಂತ್ರಿಕ ಕೈಪಿಡಿ ಹಾಗೂ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅದ್ಯಕ್ಷ ಅಶೋಕಕುಮಾರ್ ಕೊಡ್ಗಿ, ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಜಿಪಂ ಸದಸ್ಯರಾದ ಎಂ.ಸುಧಾಕರ ಶೆಟ್ಟಿ, ಗೋಪಿ ಕೆ.ನಾಯ್ಕ, ಸುಧಾಕರ ಶೆಟ್ಟಿ, ವಿವಿಯ ಕುಲಸಚಿವ ಡಾ.ಪಿ.ನಾರಾಯಣ ಸ್ವಾಮಿ, ಪ್ರಾಂಶುಪಾಲ ಡಾ.ಎಸ್.ಯು.ಪಾಟೀಲ್, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಚಂದ್ರಶೇಖರ ನಾಯ್ಕಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ಪ್ರೇಮನಾಥ ಆಳ್ವ ಉಪಸ್ಥಿತರಿದ್ದರು.
ವಲಯ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ. ಹನುಮಂತಪ್ಪ ಸ್ವಾಗತಿಸಿದರೆ, ಶಿವಮೊಗ್ಗ ವಿವಿಯ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯ್ಕಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಧನಂಜಯ ಬಿ. ವಂದಿಸಿದರೆ, ಸಂಜೀವ ಕ್ಯಾತ್ಯಪ್ಪನವರ್ ಹಾಗೂ ವೈಕುಂಠ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು.







