2045ರೊಳಗೆ ಶೇ.85ರಷ್ಟು ಹಸಿರು ಮನೆ ಅನಿಲಗಳ ನಿಯಂತ್ರಣಕ್ಕೆ 107 ರಾಷ್ಟ್ರಗಳ ಒಪ್ಪಿಗೆ

ಕಿಗಾಲಿ(ರ್ವಾಂಡಾ), ಅ.15: ಮುಂದಿನ 2045ರೊಳಗೆ ಪ್ರಬಲ ಹಸಿರು ಮನೆ ಅನಿಲದ ಗಮನಾರ್ಹ ನಿಯಂತ್ರಣ ಹಾಗೂ 2050ರೊಳಗೆ ಸಂಭಾವ್ಯ 0.5 ಡಿಗ್ರಿ ಸೆಂಟಿಗ್ರೇಡ್ ಜಾಗತಿಕ ಉಷ್ಣಾಂಶದ ತಡೆಗೆ ಕ್ರಮ ಕೈಗೊಳ್ಳಲು ರ್ವಾಂಡಾದ ಕಿಗಾಲಿಯಲ್ಲಿ 107 ರಾಷ್ಟ್ರಗಳು ಶನಿವಾರ ಒಪ್ಪಂದವೊಂದಕ್ಕೆ ಬಂದಿವೆ.
ಹೈಡ್ರೊ ಫ್ಲೋರೊ ಕಾರ್ಬನ್‌ಗಳು (ಎಚ್‌ಎಫ್‌ಸಿ) ಮನೆ ಹಾಗೂ ವಾಹನಗಳಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುವ ತಂಪುಕಾರಕಗಳ ಕುಟುಂಬಕ್ಕೆ ಸೇರಿದ ಅನಿಲಗಳಾಗಿವೆ. ಅವು ಜಾಗತಿಕ ತಾಪಮಾನವನ್ನು ಭಾರೀ ಹೆಚ್ಚಿಸುತ್ತವೆ. 2045ರೊಳಗೆ ಎಚ್‌ಎಫ್‌ಸಿಗಳ ಉಪಯೋಗವನ್ನು ಶೇ.85ರಷ್ಟು ತಗ್ಗಿಸಲು ಕಾಲ ಮಿತಿಯನ್ನು ಹಾಕಿಕೊಳ್ಳಲು ಶುಕ್ರವಾರ ರಾತ್ರಿ ಭಾರತ, ಚೀನಾ, ಅಮೆರಿಕ ಹಾಗೂ ಯುರೋಪ್ ಒಪ್ಪಿವೆ.
ಒಪ್ಪಂದದ ವಿವರ ಇನ್ನಷ್ಟೇ ಪ್ರಕಟವಾಗಬೇಕಿದೆ ಹಾಗೂ ಭಾರತದ ಪರಿಸರ ಸಚಿವಾಲಯವು ಈ ಗುರಿ ಸಾಧನೆಗಾಗಿ ದೇಶದ ಮಾರ್ಗ ನಕ್ಷೆಯನ್ನು ಇನ್ನಷ್ಟೇ ವಿವರಿಸಬೇಕಾಗಿದೆ. ಆದಾಗ್ಯೂ, ತನ್ನ ಎಚ್‌ಎಫ್‌ಸಿ ಬಳಕೆ ಕಡಿತವನ್ನು ಆರಂಭಿಸುವ ದಿನಾಂಕ ನಿಗದಿಪಡಿಸಲು ಭಾರತ ಬದ್ಧವಾಗಿಲ್ಲ. ಆದರೆ, ಶ್ರೀಮಂತ ರಾಷ್ಟ್ರಗಳು 2011-13ರಲ್ಲಿ ಂಆಡಿರುವಂತೆ, ಶೇ.70ರಷ್ಟು ಎಚ್‌ಎಫ್‌ಸಿ ಬಳಕೆಯನ್ನು ತಗ್ಗಿಸಿದ ಬಳಿಕ ತಾನು ಅದನ್ನು ಮಾಡುವೆನೆಂದು ಭಾರತ ಒಪ್ಪಿಕೊಂಡಿದೆ.
ಅಮೆರಿಕ ಮತ್ತು ಯುರೋಪ್ ನೇತೃತ್ವದ ಶ್ರೀಮಂತ ರಾಷ್ಟ್ರಗಳು 2011-13ರನ್ನು ಮೂಲ ರೇಖೆಯಾಗಿರಿಸಿ, 2036ರೊಳಗೆ ಶೇ.85ರಷ್ಟು ಎಚ್‌ಎಫ್‌ಸಿ ಬಳಕೆಯನ್ನು ತಗ್ಗಿಸಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಎಚ್‌ಎಫ್‌ಸಿ ಉತ್ಪಾದಕ ದೇಶವಾದ ಚೀನಾ 2020-22ನ್ನು ಮೂಲ ಮಾನವಾಗಿರಿಸಿಕೊಂಡು 2045ರೊಳಗೆ ಶೇ.80ರಷ್ಟು ಬಳಕೆಯನ್ನು ಇಳಿಸಲಿದೆ. ಭಾರತವು 2024-266 ಮೂಲ ರೇಖೆಗಿಂತ ಶೇ.85ರಷ್ಟು ಎಚ್‌ಎಫ್‌ಸಿ ಬಳಕೆಯನ್ನು 2045ರೊಳಗೆ ಕಡಿತಗೊಳಿಸಲಿದೆ.







