ಕ್ರೀಡಾ ನೀತಿ ಜಾರಿಯಾಗಲಿ: ಐವನ್ ಡಿಸೋಜ
‘ಗುಡ್ಡೆಡ್ ಒಂಜಿ ವಾಲಿಬಾಲ್‌ದ ಗೊಬ್ಬು’ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ

ಮಂಗಳೂರು, ಅ. 15: ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಬೇಕಾದರೆ ಕ್ರೀಡಾ ನೀತಿ ಜಾರಿಆಗಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಯುನೈಟೆಡ್ ನಂದಿಗುಡ್ಡ ಸಂಘಟನೆಯ ವತಿಯಿಂದ ನಂದಿಗುಡ್ಡದ ನಾಯಕ್ಸ್ ಮೈದಾನಿನಲ್ಲಿ ಶನಿವಾರ ಆಯೋಜಿಸಲಾದ ‘ಗುಡ್ಡೆಡ್ ಒಂಜಿ ವಾಲಿಬಾಲ್‌ದ ಗೊಬ್ಬು- 2016’ ಪಂದ್ಯಾಟದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಟಗಾರರಿಗೆ ದೊರೆಯಬೇಕಾದ ಪ್ರೋತ್ಸಾಹ ಹಾಗೂ ಬೆಂಬಲ ನಿರೀಕ್ಷಿತ ಮಟ್ಟದಲ್ಲಿ ದೊರೆತಿಲ್ಲ. ಈ ನಿಟ್ಟಿನಲ್ಲಿ ಕ್ರೀಡಾಳುಗಳನ್ನು ಪೋತ್ಸಾಹಿಸಲು ರಾಜ್ಯಕ್ಕೆ ಕ್ರೀಡಾ ನೀತಿಯ ಅಗತ್ಯದ ಬಗ್ಗೆ ಧ್ವನಿ ಎತ್ತಿದ್ದೆ. ಅಲ್ಲದೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಸಹಿತ ಹಾಜರಾತಿ ನೀಡುವಂತೆಯೂ ಸಲಹೆ ನೀಡಿದ್ದೆ ಎಂದು ಐವನ್ ಹೇಳಿದರು.
ಪಂದ್ಯಾವಳಿಗಳನ್ನು ನಡೆಸಲು ಅಥವಾ ಕ್ರೀಡಾಪಟುಗಳಿಗೆ ತನ್ನ ಪ್ರತಿಭೆಗಳನ್ನು ತೋರಿಸಲು ನಗರದಲ್ಲಿದ್ದ ಮೈದಾನಗಳನ್ನು ಕಂಪೆನಿಗಳು ಅತಿಕ್ರಮಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳಿಗೆ ಆಟಕ್ಕೂ ವ್ಯವಸ್ಥೆಯಿಲ್ಲದಂತಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಹರಿನಾಥ್, ಕ್ರಿಕೆಟ್‌ಗೆ ನೀಡುವಂತಹ ಪ್ರಾಶಸ್ತ್ಯ ವಾಲಿಬಾಲ್‌ಗೂ ನೀಡಬೇಕಿದ್ದು, ಈ ಆಟಕ್ಕೆ ಹೆಚ್ಚು ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ಹಾಗೂ ತರಬೇತುದಾರ ನಾಗೇಶ್ ಎ. ಹಾಗೂ ವಾಲಿಬಾಲ್ ಆಟಗಾರ ಗಣೇಶ್ ಪುತ್ತೂರು ಅವರನ್ನು ಸಮ್ಮಾನಿಸಲಾಯಿತು.
ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಿ, ಕಾರ್ಪೊರೇಟರ್‌ರಾದ ಪ್ರೇಮಾನಂದ ಶೆಟ್ಟಿ, ಶೈಲಜಾ, ಪ್ರೊೆಸರ್ ಎಂ.ಎನ್. ಶೆಟ್ಟಿ, ಯುನೈಟೆಡ್ ನಂದಿಗುಡ್ಡೆಯ ಗೌರವಾಧ್ಯಕ್ಷ ರೋಶನ್ ಡಿಮೆಲ್ಲೊ, ಕೆ.ಪಿ. ಶೆಟ್ಟಿ, ಪುಂಡಲೀಕ ಸುವರ್ಣ, ಸಂದೀಪ್ ವಿನಯ್ ಮತ್ತಿತರರು ಉಪಸ್ಥಿತರಿದ್ದರು.







