ಮನಸ್ಸಿನ ಮೈಲಿಗೆ ತೊಡೆದು ಹಾಕಿದರೆ ಜಾತಿ ಪದ್ಧತಿ ನಿಮೂರ್ಲನೆ: ಶಾಸಕ ವೈ.ಎಸ್.ವಿ. ದತ್ತ
ಮಹರ್ಷಿ ವಾಲ್ಮೀಕಿ ಜಯಂತಿ

ಕಡೂರು ಅ. 15: ಮನುಷ್ಯರು ತಮ್ಮ ಮನಸ್ಸಿನ ಮೈಲಿಗೆಯನ್ನು ತೊಡೆದು ಹಾಕಿಕೊಂಡರೆ ಅದೇ ನಿಜವಾದ ಜಾತಿ ಪದ್ಧತಿ ನಿಮೂರ್ಲನೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಅವರು ಶನಿವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ವಾಲ್ಮೀಕಿ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾನ್ ಪುರುಷರನ್ನು ಜಾತಿ ಸಂಕೋಲೆಯಿಂದ ಬೇರ್ಪಡಿಸಿ ಎಲ್ಲರ ಆಸ್ತಿಯನ್ನಾಗಿ ಮಾಡಬೇಕಾಗಿದೆ. ರಾಮನ ಹೆಸರಿನಲ್ಲಿ ಮನುಷ್ಯರ ನಡುವೆ ಕಂದಕವನ್ನು ಸೃಷ್ಟಿಸುತ್ತಿರುವವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಶಾಸಕರು ಸಲಹೆ ಮಾಡಿದರು.
ವಾಲ್ಮೀಕಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡಿಸಿದ ಕೀರ್ತಿ ಅಂದಿನ ಪ್ರಧಾನಿ ಚಂದ್ರಶೇಖರ್ ಮತ್ತು ಎಚ್.ಡಿ. ದೇವೇಗೌಡ ಅವರಿಗೆ ಸಲ್ಲುತ್ತದೆ. ಪರಿಶಿಷ್ಟ ವರ್ಗದಲ್ಲಿ 1991ರಲ್ಲಿ ರಾಜಕೀಯ ಮೀಸಲಾತಿ ಅತ್ಯಲ್ಪವಾಗಿತ್ತು, ಆದರೆ 2008ರಿಂದ ಕರ್ನಾಟಕದಲ್ಲಿ 11 ಮೀಸಲು ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮಾಜದವರೇ ಜನಪ್ರತಿನಿಧಿಗಳಾಗಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಮಾನವ ಜನಾಂಗಕ್ಕೆ ಮಹಾನ್ ಗ್ರಂಥ ರಾಮಾಯಣವನ್ನು ಕೊಡುಗೆಯಾಗಿ ನೀಡಿದ್ದಾರಲ್ಲದೆ ಶ್ಲೋಕವನ್ನು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ಜಿಪಂ ಸದಸ್ಯ ಕೆ.ಆರ್.ಮಹೇಶ್‌ಒಡೆಯರ್ ಮಾತನಾಡಿದರು. ಸಮಾರಂಭದಲ್ಲಿ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ತಹಶೀಲ್ದಾರ್ ಎಂ.ಭಾಗ್ಯ, ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ಜಿಪಂ ಸದಸ್ಯೆ ಕಾವೇರಿ ಲಕ್ಕಪ್ಪ, ತಾಪಂ ಉಪಾಧ್ಯಕ್ಷ ಎಚ್.ಜಿ. ರುದ್ರಮೂರ್ತಿ, ಬೀರೂರು ಪುರಸಭಾಧ್ಯಕ್ಷೆ ಸವಿತಾ ರಮೇಶ್, ಸದಸ್ಯ ಎನ್. ಬಷೀರ್‌ಸಾಬ್, ತಾಪಂ ಸದಸ್ಯ ಎಸ್.ಕೆ. ಚಂದ್ರಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಕಲ್ಲೇಶಪ್ಪ, ವಾಲ್ಮೀಕಿ ಜನ್ಮ ದಿನಾಚರಣಾ ಸಮಿತಿ ಅಧ್ಯಕ್ಷ ಸುರೇಶ, ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಕರಿಯಪ್ಪಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







