ಕಾಗೋಡು ವಿರುದ್ಧ ಕುಮಾರ್ ಬಂಗಾರಪ್ಪ ವಾಗ್ದಾಳಿ
ಶಿವಮೊಗ್ಗ ‘ ಕೈ’ ಪಾಳೆಯದಲ್ಲಿ ‘ಬಗರ್‌ಹುಕುಂ ಸಮಿತಿ’ ಬಿರುಗಾಳಿ ?
<ಬಿ. ರೇಣುಕೇಶ್
ಶಿವಮೊಗ್ಗ, ಅ. 15: ಪ್ರಸ್ತುತ ಜಿಲ್ಲಾ ಬಿಜೆಪಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪಹಾಗೂ ಕೆ.ಎಸ್. ಈಶ್ವರಪ್ಪನವರ ನಡುವೆ ನಡೆಯುತ್ತಿರುವ ಕಲಹ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿಯೂ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ಮಾಜಿ ಸಚಿವ ಕುಮಾರ್ ಬಂಗಾರಪ್ಪಬಹಿರಂಗವಾಗಿಯೇ ಟೀಕಾಪ್ರಹಾರ ನಡೆಸುವ ಮೂಲಕ ಭಿನ್ನಮತದ ಕಹಳೆ ಮೊಳಗಿಸಿದ್ದಾರೆ.
ಇದು ಕಾಂಗ್ರೆಸ್ ಪಾಳೆಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕಳೆದ ಹಲವು ವರ್ಷಗಳಿಂದ ದಿವಂಗತ ಎಸ್.ಬಂಗಾರಪ್ಪನವರ ಪುತ್ರರಾದ ಕುಮಾರ್ ಹಾಗೂ ಮಧು ನಡುವೆ ನಡೆಯುತ್ತಿರುವ ಕಲಹದಲ್ಲಿ ಕಾಗೋಡು ತಿಮ್ಮಪ್ಪಸೇರ್ಪಡೆಯಾಗುವಂತಾಗಿದೆ. ಇದರಿಂದ ‘ದಾಯಾದಿ ಕಲಹ’ ಹೊಸ ತಿರುವು ಪಡೆದುಕೊಂಡಂತಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೈಡ್ರಾಮಾಗಳಿಗೆ ಸಾಕ್ಷಿಯಾಗುವ ಸಾಧ್ಯತೆ ದಟ್ಟವಾಗಿದೆ. ಸಿಟ್ಟಿಗೆ ಕಾರಣವೇನು?: ಕಾಗೋಡು ತಿಮ್ಮಪ್ಪ ಹಾಗೂ ಸೊರಬ ಕ್ಷೇತ್ರದ ಜೆಡಿಎಸ್ ಶಾಸಕ ಮಧು ಬಂಗಾರಪ್ಪರ ನಡುವೆ ಆತ್ಮೀಯತೆಯ ಜೊತೆಗೆ ಉತ್ತಮ ಬಾಂಧವ್ಯವಿದೆ. ಕಾಗೋಡುರವರ ಬಗ್ಗೆ ಸಾಕಷ್ಟು ಗೌರವ ಭಾವನೆಯನ್ನು ಮಧು ಹೊಂದಿದ್ದಾರೆ. ಉಳಿದಂತೆ ಕಾಗೋಡು ಹಾಗೂ ಕುಮಾರ್ ಬಂಗಾರಪ್ಪ ಒಂದೇ ಪಕ್ಷದಲ್ಲಿದ್ದರೂ ಇಬ್ಬರ ನಡುವಿನ ಸಂಬಂಧ ಅಷ್ಟಕಷ್ಟೆ ಎಂಬಂತಿದೆ. ಇತ್ತೀಚೆಗೆ ಸೊರಬ ತಾಲೂಕು ಬಗರ್‌ಹುಕುಂ ಸಮಿತಿಯ ಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬದಲಿಸಿ, ಜೆಡಿಎಸ್ ಪಕ್ಷದ ಕಾರ್ಯಕರ್ತರ ನಿಯೋಜನೆ ಮಾಡಲಾಗಿದೆ. ಮಧು ಸಲಹೆಯಂತೆ ಕಾಗೋಡು ತಿಮ್ಮಪ್ಪನವರು ಕಾರ್ಯಕರ್ತರ ನ್ನು ನೇಮಕ ಮಾಡಿದ್ದಾರೆ ಎಂಬುವುದು ಕುಮಾರ್ ಬಂಗಾರಪ್ಪಬೆಂಬಲಿಗರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಸೊರಬದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಕುಮಾರ್ ಬಂಗಾರಪ್ಪ ಸಚಿವ ಕಾಗೋಡು ವಿರುದ್ಧ ಹರಿಹಾಯ್ದು, ಟೀಕಾಪ್ರಹಾರ ನಡೆಸಿದ್ದು, ‘ಬಗರ್‌ಹುಕುಂ ಸಮಿತಿಗೆ ಜೆಡಿಎಸ್ ಸದಸ್ಯರನ್ನು ನೇಮಿಸಿದ್ದು ಯಾವ ಪುರುಷಾರ್ಥಕ್ಕೆ ಎಂಬುವುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಕೆಪಿಸಿಸಿ ವರಿಷ್ಠರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾಗೋಡು ಕಾರಣ’ ಎಂದು ಕುಟುಕಿದ್ದರು. ‘ಕಾಂಗ್ರೆಸ್‌ನಲ್ಲಿದ್ದು ಕೊಂಡು ಬೇರೆ ಪಕ್ಷವನ್ನು ಪರೋಕ್ಷವಾಗಿ ಬೆಂಬಲಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅಂತಹವರು ಕಾಂಗ್ರೆಸ್ ತೊರೆದು ಪರೋಕ್ಷವಾಗಿ ಬೆಂಬಲಿಸುವ ಪಕ್ಷವನ್ನೇ ಸೇರಲಿ’ ಎಂದೆಲ್ಲ ಕಾಗೋಡು ತಿಮ್ಮಪ್ಪವಿರುದ್ದ ಟೀಕಾಪ್ರಹಾರ ನಡೆಸಿದ್ದರು.
ಸಹೋದರರ ಕಾಳಗ: ಸೊರಬ ಕ್ಷೇತ್ರವು ಕಳೆದ ಹಲವು ವರ್ಷಗಳಿಂದ ಸಹೋದರರ ರಾಜಕಾರಣದ ಕಲಹಕ್ಕೆ ಸಾಕ್ಷಿಯಾಗುತ್ತಾ ಬಂದಿದೆ. ಅವಕಾಶ ಲಭ್ಯವಾದ ಸಂದರ್ಭಗಳು ದೊರೆತಾಗಲೆಲ್ಲಾ ಕುಮಾರ್ ಹಾಗೂ ಮಧು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿಯೇ ತೊಡಗುವುದು ಸರ್ವೇ ಸಾಮಾನ್ಯವಾಗಿತ್ತು. ಇತ್ತೀಚೆಗೆ ಸಹೋದರರ ಬಹಿರಂಗ ವಾಕ್ಸಮರ ಕಡಿಮೆಯಾಗಿತ್ತು. ಇದೀಗ ಬಗರ್‌ಹುಕುಂ ಸಮಿತಿ ಸದಸ್ಯರ ನೇಮಕದ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಮತ್ತೆ ಕಲಹ ತಾರಕಕ್ಕೇರಿದೆ. ಸೊರಬ ತಾಲೂಕು ಬಗರ್‌ಹುಕುಂ ಸಮಿತಿಯ ಸದಸ್ಯರ ನೇಮಕದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಸಿಂಹಪಾಲು ಲಭ್ಯವಾಗಿರುವುದಕ್ಕೆ ಕಾಗೋಡು ತಿಮ್ಮಪ್ಪಕಾರಣ ಎಂದು ಕುಮಾರ್ ಬಂಗಾರಪ್ಪ ಆರೋಪಿಸುವ ಮೂಲಕ ಸಹೋದರರ ಕಲಹದಲ್ಲಿ ಕಾಗೋಡು ಶಾಮೀಲಾದಂತಾಗಿದೆ. ಈ ಕಲಹ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ. ಕುಮಾರ್ ವಿರುದ್ಧ ಮಂಜುನಾಥ ಭಂಡಾರಿ ಗರಂ: ಶಿಸ್ತು ಕ್ರಮಕ್ಕೆ ಆಗ್ರಹ ಶಿವಮೊಗ್ಗ, ಅ. 15: ಪಕ್ಷದ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪರವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ, ಯೋಗ್ಯತೆ ಕುಮಾರ್ ಬಂಗಾರಪ್ಪರಿಗೆ ಇಲ್ಲ. ಕಾಗೋಡು ಏನೆಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ ಎಂದು ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಟೀಕಾಪ್ರಹಾರ ನಡೆಸಿದ್ದಾರೆ. ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೇ ಸಮಸ್ಯೆಯಿದ್ದರೂ ಅದನ್ನು ಪಕ್ಷದ ಮುಖಂಡರ ಗಮನಕ್ಕೆ ತಂದು ಕುಳಿತು ಚರ್ಚೆ ನಡೆಸಬೇಕು. ಇದಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ, ಕುಮಾರ್ ಬಂಗಾರಪ್ಪನವರು ಬಹಿರಂಗವಾಗಿ ಬಾಯಿಗೆ ಬಂದಂತೆ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿರುವುದು ಸರಿಯಲ್ಲ. ಮಾತನಾಡುವ ಮುನ್ನ ಅವರು ಪಕ್ಷಕ್ಕೆ ಕೊಟ್ಟ ಕೊಡುಗೆ ಏನೆಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸೊರಬ ತಾಲೂಕಿನ ಜಿಪಂನ ಐದು ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಎರಡು ವಿಧಾನಸಭೆ ಚುನಾವಣೆಗಳಲ್ಲಿ ಕುಮಾರ್ ಪರಾಭವಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಕುಮಾರ್ ಬಂಗಾರಪ್ಪಮೊದಲು ಸೊರಬ ಕ್ಷೇತ್ರದಲ್ಲಿ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಲಿ. ಅದು ಬಿಟ್ಟು ತಮ್ಮ ಕೆಲ ಚೇಲಾಗಳೊಂದಿಗೆ ಪಕ್ಷದ ಸಂಘಟನೆ ಹಾಳು ಮಾಡುವುದು ಕೆಲಸ ಮಾಡಬಾರದು ಎಂದು ಕಿಡಿಕಾರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕಿಳಿದ ವೇಳೆ ಕುಮಾರ್ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಪರೋಕ್ಷವಾಗಿ ಮತ್ತೊಂದು ಪಕ್ಷವನ್ನು ಬೆಂಬಲಿಸುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದಿದ್ದರು. ಇಂತಹ ವ್ಯಕ್ತಿ ಕಾಗೋಡು ಪಕ್ಷ ಬಿಟ್ಟು ಹೋಗಲಿ ಎಂದು ಹೇಳುವ ಅರ್ಹತೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಕಾಗೋಡು ವಿರುದ್ಧ ಹೇಳಿಕೆ ಸರಿಯಲ್ಲ: ತೀ.ನಾ. ಶ್ರೀನಿವಾಸ್: ಕಾಗೋಡು ತಿಮ್ಮಪ್ಪರವರು ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಅವರ ಶ್ರಮ ಅಪಾರವಾದು. ಆದರೆ, ಕುಮಾರ್ ಬಂಗಾರಪ್ಪನವರು ಅವರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಅವರ ಹೇಳಿಕೆಯನ್ನು ಜಿಲ್ಲಾ ಸಮಿತಿ ಗಂಭೀರವಾಗಿ ಪರಿಗಣಿಸಿದ್ದು, ವರಿಷ್ಠರ ಗಮನಕ್ಕೂ ತರಲಾಗಿದೆ. ವರಿಷ್ಠರ ಮುಂದಿನ ಸೂಚನೆಯಂತೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ. ನಾ. ಶ್ರೀನಿವಾಸ್ ತಿಳಿಸಿದ್ದಾರೆ. ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೊರಬ ತಾಲೂಕು ಬಗರ್‌ಹುಕುಂ ಸಮಿತಿಗೆ ಸದಸ್ಯರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರ್ ಬಂಗಾರಪ್ಪತಮಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತಾವು ಕಾಗೋಡು ತಿಮ್ಮಪ್ಪ ರೊಂದಿಗೆ ಚರ್ಚೆ ನಡೆಸಿದ್ದೆ. ಈ ಬಗ್ಗೆ ಸೂಕ್ತ ಗಮನಹರಿಸುವ ಭರವಸೆಯನ್ನು ಕಾಗೋಡು ತಮಗೆ ನೀಡಿದ್ದರು. ಇಂತಹ ಸಂದರ್ಭದಲ್ಲಿ ಕುಮಾರ್ ಅವರ ವಿರುದ್ಧ ಬಹಿರಂಗವಾಗಿ ಆರೋಪ ಮಾಡುತ್ತಿರುವುದು ಸರಿಯಲ್ಲ. ಕಾಗೋಡುರವರ ನೈತಿಕತೆಯನ್ನು ಪ್ರಶ್ನಿಸುವ ಅರ್ಹತೆ ಯಾರಿಗೂ ಇಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕಾಗಿದೆ. ಇನ್ನು ಮುಂದೆ ರವರು ಪಕ್ಷದ ಹಿತಾಸಕ್ತಿ, ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಬಾರದು. ಏನೇ ಸಮಸ್ಯೆ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಪರಿಹರಿಸಿಕೊಳ್ಳಬೇಕು ಎಂದು ತೀ.ನಾ.ಶ್ರೀನಿವಾಸ್‌ತಾಕೀತು ಮಾಡಿದ್ದಾರೆ.







