ಹೊನ್ನಾವರ: ಒಳ ಚರಂಡಿ ಕಾಮಗಾರಿ ಆರಂಭಿಸಲು ತೀರ್ಮಾನ
ಸಾಧಕ-ಬಾಧಕ ಸಭೆ

ಹೊನ್ನಾವರ, ಅ15: ಪಟ್ಟಣದ ಒಳಚರಂಡಿ ಯೋಜನೆಯ ಕಾಮಗಾರಿಯ ಸಾಧಕ-ಬಾಧಕಗಳ ಕುರಿತು ಪಪಂ ಸಭಾಭವನದಲ್ಲಿ ಅಧ್ಯಕ್ಷೆ ಜೈನಾಬಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಒಳಚರಂಡಿ ಇಲಾಖೆ ಅಭಿಯಂತರ ಸುರೇಶ ಕುಮಾರ್ ಮಾತನಾಡಿ, ಈಗಾಗಲೇ ಸಚಿವ ಆರ್‌ವಿ ದೇಶಪಾಂಡೆಯವರು ಶಂಕು ಸ್ಥಾಪನೆ ನೆರವೇರಿಸಿದ್ದು ಕಾಮಗಾರಿಯನ್ನು 24 ತಿಂಗಳಲ್ಲಿ ಪೂರ್ತಿಗೊಳಿಸಲು ಆದೇಶಿಸಿದ್ದಾರೆ. 29 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುವ ಈ ಕಾಮಗಾರಿ 2042ರ ಜನಸಂಖ್ಯೆ ಆಧರಿಸಿ ನೀಲಿನಕ್ಷೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸುಮಾರು 25,000 ಜನರಿಗೆ ಈ ಒಳ ಚರಂಡಿ ಯೊಜನೆಯನ್ನು ಮೂರು ವಿಭಾಗಗಳನ್ನಾಗಿಸಿ ಮಾಡಲಾಗಿದೆ. ಈಗಾಗಲೇ ಸರ್ವೆ ರೂಪರೇಷೆಗಳನ್ನು ಸಿದ್ಧಗೊಳಿಸಿದ್ದು 54ಕಿ.ಮಿ, ವ್ಯಾಪ್ತಿಯ ಒಳಚರಂಡಿಗೆ ಕಾಮಗಾರಿ ನಡೆಸಲಾಗುವುದು ಎಂದರು.
ಕಾಮಗಾರಿ ಗುತ್ತಿಗೆ ಕಂಪೆನಿಯ ವಿನ್ಯಾಸಕ ಅಭಿಯಂತರ ರಾಜಶೇಖರವರು ಮಾತನಾಡಿ ಒಂದನೆ ವಿಭಾಗದಲ್ಲಿ ರಾಮತೀರ್ಥ, ಎರಡನೆ ವಿಭಾಗದಲ್ಲಿ ಉದ್ಯಮನಗರ ಹಾಗೂ ಮೂರನೆ ವಿಭಾಗದಲ್ಲಿ ಕೆಳಗಿನ ಪಾಳ್ಯದ ಜೀವನ ಜ್ಯೋತಿ ಪ್ರದೇಶಗಳಲ್ಲಿ ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗುವುದು ಈ ಯೋಜನೆಯಿಂದ ಜನರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಆತಂಕ ಪಡುವುದು ಬೇಡವೆಂದು ಕಾಮಗಾರಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಇದೇ ಸಂದರ್ಭ ಪಪಂ ಸದಸ್ಯ ನೀಲಕಂಠ ನಾಯ್ಕ ಮಾತನಾಡಿ, ಈ ಕಾಮಗಾರಿ ಪೂರ್ಣಗೊಂಡಮೇಲೆ ನಿರ್ವಹಣೆ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಒಂದು ವರ್ಷದ ವರೆಗೆ ಗುತ್ತಿಗೆ ಪಡೆದ ಕಂಪೆನಿಯೆ ನಿರ್ವಹಣೆ ಮಾಡುತ್ತದೆ, ಯಾವುದೇ ತೊಂದರೆ ಉಂಟಾದಲ್ಲಿ ಕ್ರಮ ಕೈಗೊಳ್ಳಲಾಗುವುದು, ಒಂದು ವರ್ಷದ ನಂತರ ಏಜೆನ್ಸಿಯವರಿಗೆ ನಿರ್ವಹಣೆಗೆ ನೀಡಲಾಗುವುದು.ಇದು ವಿನೂತನವಾಗಿ ವ್ಯೆಜ್ಞಾನಿಕ ತಂತ್ರಜ್ಞಾನ ಇರುವುದರಿಂದ ಅಂತಹ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗುಣಮಟ್ಟದ ಕಾಮಗಾರಿ ಮಾಡಬೇಕು ಜನರಿಗೆ ಬಹುಕಾಲ ಬಾಳಿಕೆಯಾಗುವಂತೆ ಮಾಡಲು ಸದಸ್ಯರು ಸೂಚಿಸಿದರು.
ಸ್ಥಾಯಿ ಸಮಿತಿಯ ಅಧ್ಯಕ್ಷ ಸುರೇಶ ಮೇಸ್ತ, ಸದಸ್ಯರಾದ ಬಾಲಕೃಷ್ಣ ಬಾಳೇರಿ, ತಾರ ಕುಮಾರ ಸ್ವಾಮಿ, ಮಂಜುನಾಥ ಖಾರ್ವಿ, ಇರ್ಫಾನ್ ಸಾಬ್, ಸಿ.ಜಿ.ನಾಯ್ಕ, ಸುರೇಶ ಶೇಟ್, ಮುಖ್ಯಾಧಿಕಾರಿ ಅರುಣ ನಾಯ್ಕ, ಕಂಪೆನಿಯ ಅಭಿಯಂತರ ಹರಿನಾಥ ಉಪಸ್ಥಿತರಿದ್ದರು.







