ಮಿಯಾಂದಾದ್-ಅಫ್ರಿದಿ ಭಿನ್ನಾಭಿಪ್ರಾಯಕ್ಕೆ ತೆರೆ

ಕರಾಚಿ, ಅ.15: ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹಾಗೂ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ನಡುವಿನ ವಾಕ್ಸಮರಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಇಬ್ಬರು ಪರಸ್ಪರ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿಕೊಳ್ಳುವುದರೊಂದಿಗೆ ಮಾತಿನ ಚಕಮಕಿ ವಿವಾದದ ಸ್ವರೂಪ ಪಡೆದಿತ್ತು.
‘‘ಕೋಪದ ಆವೇಶದಲ್ಲಿ ತಪ್ಪು ಆರೋಪ ಮಾಡಿದೆ. ನನ್ನ ಹೇಳಿಕೆಯನ್ನು ವಾಪಸು ಪಡೆಯುವೆ’’ ಎಂದು ಅಫ್ರಿದಿ ವಿರುದ್ಧ ಮಾಡಿದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಉಲ್ಲೇಖಿಸಿ ಮಿಯಾಂದಾದ್ ಹೇಳಿದರು.
ಅಫ್ರಿದಿ ಕೂಡ ಮಿಯಾಂದಾದ್ ಕುರಿತು ಮಾಡಿರುವ ಆರೋಪಕ್ಕೆ ಕ್ಷಮೆ ಕೋರಿದ್ದು, ಅವರು ನನಗೆ ದೊಡ್ಡಣ್ಣನಿದ್ದಂತೆ ಎಂದು ಹೇಳಿದ್ದಾರೆ.
‘‘ಜಾವೇದ್ ಬಾಯ್ ಮಾಡಿರುವ ಆರೋಪದಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ. ನಾನು ಅವರ ವಿರುದ್ಧ ಮಾಡಿರುವ ಆರೋಪ ಸರಿಯಾಗಿರಲಿಲ್ಲ ಎಂದು ನನಗೆ ಮನವರಿಕೆಯಾಗಿದೆ. ಅವರ ಮನಸ್ಸನ್ನು ನೋಯಿಸಿದ್ದಕ್ಕೆ ಕ್ಷಮೆ ಕೋರುವೆ’’ ಎಂದು ಅಫ್ರಿದಿ ಹೇಳಿದರು. ಪರಸ್ಪರ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡುವ ಮೂಲಕ ಪಾಕ್ ಕ್ರಿಕೆಟ್‌ಗೆ ಮುಜುಗರ ತಂದಿದ್ದ ಇಬ್ಬರು ಆಟಗಾರರು ಅಪ್ಪಿಕೊಂಡು ವೈಮನಸ್ಸನ್ನು ಕೊನೆಗೊಳಿಸುವ ಸೂಚನೆ ನೀಡಿದರು.
ಪಾಕ್‌ನ ಮಾಜಿ ನಾಯಕ ವಾಸೀಂ ಅಕ್ರಂ ಹಾಗೂ ಅಫ್ರಿದಿಯ ಚಿಕ್ಕಪ್ಪ ಇಕ್ಬಾಲ್ ಮುಹಮ್ಮದ್ ಈ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸಿದ್ದಾರೆ ಎನ್ನಲಾಗಿದೆ.







