ನಾಳೆಯಿಂದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಕಬಡ್ಡಿ
ಮಂಗಳೂರು,ಅ.15: ಬೆಸೆಂಟ್ ಸಂಧ್ಯಾ ಕಾಲೇಜು ಹಾಗೂ ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘಗಳ ಜಂಟಿ ಆಶ್ರಯದಲ್ಲಿ ಅ.17ರಿಂದ 19ರವರೆಗೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟವನ್ನು ಉರ್ವ ಮಾರ್ಕೆಟ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಸೆಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ನಾರಾಯಣ್ ಭಟ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.17ರಂದು ಬೆಳಗ್ಗೆ 9:30ಕ್ಕೆ ನಡೆಯುವ ಪಂದ್ಯಾಟದ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಜೆ.ಆರ್.ಲೋಬೊ ಚಾಲನೆ ನೀಡಲಿದ್ದಾರೆ. ಮಂಗಳೂರು ವಲಯದ ಸ್ಪರ್ಧೆಯಲ್ಲಿ ಮಂಗಳೂರು ಹಾಗೂ ಕೊಡಗು ಜಿಲ್ಲೆಯ ಒಟ್ಟು 46 ತಂಡಗಳು ಭಾಗವಹಿಸಲಿದ್ದು, ಮಂಗಳೂರು ವಲಯ ಸ್ಪರ್ಧೆಯ ಉನ್ನತ 4 ತಂಡಗಳು ಅಂತರ್ ವಲಯ ಪಂದ್ಯಾಟಕ್ಕೆ ಅರ್ಹತೆಯನ್ನು ಪಡೆದುಕೊಳ್ಳಲಿವೆ ಎಂದರು. ಅ.18ರಂದು ನಡೆಯುವ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು. ವುಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೆ ಅ.19ರಂದು ಮಂಗಳೂರು ವಲಯ ಮತ್ತು ಉಡುಪಿ ವಲಯದ 8 ತಂಡಗಳ ನಡುವೆ ಸ್ಪರ್ಧೆ ನಡೆಯಲಿದ್ದು, ಇಲ್ಲಿ ವಿಜೇತರಾದ ತಂಡಕ್ಕೆ ರತ್ನವರ್ಮ ಹೆಗ್ಗಡೆ ಸ್ಮಾರಕ ಪಾರಿತೋಷಕ ನೀಡಿ ಸನ್ಮಾನಿಸಲಾಗುವುದು.
ಸಂಜೆ 4:30ಕ್ಕೆ ಸಮಾರೋಪ ನಡೆಯಲಿದ್ದು, ಕಾಲೇಜಿನ ಸಂಚಾಲಕ ನಗರ್ ನಾರಾಯಣ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವುಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ, ಸಂಚಾಲಕ ಹರೀಶ್ ಉಪಸ್ಥಿತರಿದ್ದರು.