ಕುದ್ರೋಳಿ ದೇವಳಕ್ಕೆ ಸಿಎಂ ಭೇಟಿ ನೀಡದ ಬಗ್ಗೆ ಬೇಸರವಿದೆ: ಮಧು ಬಂಗಾರಪ್ಪ
ಮಂಗಳೂರು, ಅ.15: ದಸರಾ ಸಂದರ್ಭ ಮಂಗಳೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡದಿರುವುದು ಬೇಸರವಾಗಿದೆ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ. ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ, ಪೀಠ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಯವರು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಅಭಿಮಾನವಿದೆ. ಆದರೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿರುವ ಕುದ್ರೋಳಿ ಕ್ಷೇತ್ರಕ್ಕೆ ವೈಯಕ್ತಿಕವಾಗಿ ಒಬ್ಬರ ಮೇಲಿನ ದ್ವೇಷದಿಂದ ಭೇಟಿ ನೀಡಿಲ್ಲ ಎಂಬ ಭಾವನೆ ಇದೆ. ಈ ಬಗ್ಗೆ ಅಸಮಾಧಾನವಿದೆ ಎಂದರು. ರಾಷ್ಟ್ರದಲ್ಲಿ ಬಿಜೆಪಿ ಧರ್ಮಗಳೊಳಗೆ ಬಿರುಕು ಮೂಡಿಸುವ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭ ನಾನು ಗೋಕರ್ಣ ದೇವಸ್ಥಾನ, ಉಡುಪಿ ಮಠದ ಬಗ್ಗೆ ಮಾತನಾಡುವುದಿಲ್ಲ. ಆದರೆ ಕಳೆದ 10 ವರ್ಷಗಳಿಂದ ಅದೆಷ್ಟು ಯುವಕರ ಹತ್ಯೆ, ಕೊಲೆ ನಡೆಯಿತು ಎಂಬ ಬಗ್ಗೆ ಅರಿತುಕೊಳ್ಳಬೇಕಿದೆ. ಅದಕ್ಕಾಗಿ ಯುವಕರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ವಿಭಿನ್ನ ರೀತಿಯಲ್ಲಿ ಜೆಡಿಎಸ್ ಹೋರಾಟಕ್ಕಿಳಿಯಲಿದೆ ಎಂದು ಮಧು ಬಂಗಾರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ.ಸದಾಶಿವ, ಮುಹಮ್ಮದ್ ಕುಂಞಿ, ಎಸ್.ಪಿ.ಚೆಂಗಪ್ಪ, ವಸಂತ ಪೂಜಾರಿ ಉಪಸ್ಥಿತರಿದ್ದರು.





