ಕಬಡ್ಡಿ ವಿಶ್ವಕಪ್: ಭಾರತಕ್ಕೆ ಭರ್ಜರಿ ಜಯ

ಅಹ್ಮದಾಬಾದ್,ಅ.15: ಇಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್‌ನಲ್ಲಿ ಇಂದು ಭಾರತ ತಂಡ ಅರ್ಜೆಂಟೀನ ವಿರುದ್ಧ 74-20 ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ.
ಈಗಾಗಲೇ ನಡೆದಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಗಳಿಸಿರುವ ಭಾರತ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದೆ. ಇಂದು ನಡೆದ ಪಂದ್ಯದಲ್ಲಿ ಅನೂಪ್ ಕುಮಾರ್ ನೇತೃತ್ವದ ಭಾರತದ ತಂಡದ ಅಜಯ್ ಠಾಕೂರ್ 14 ಪಾಯಿಂಟ್‌ಗಳನ್ನು ತಂಡದ ಖಾತೆಗೆ ಜಮೆ ಮಾಡಿದರು. ರಾಹುಲ್ ಚೌಧರಿ(11), ಸುರೇಂದ್ರ ನಡ್ಡಾ (7), ಸುರ್ಜಿತ್(6) , ಪ್ರದೀಪ್ ನರ್ವಾಲ್ (5), ಮಂಜೀತ್ ಚಿಲ್ಲರ್(5) ಮತ್ತು ಕಿರಣ್ ಪಾರ್‌ಮರ್(5) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಎ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡ ಆಸ್ಟ್ರೇಲಿಯವನ್ನು 63-25 ಅಂತರದಲ್ಲಿ ಬಗ್ಗು ಬಡಿದು ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತವನ್ನು ಮೊದಲ ಪಂದ್ಯದಲ್ಲಿ ಸೋಲಿಸುವ ಮೂಲಕ ಗೆಲುವಿನ ಅಭಿಯಾನ ಆರಂಭಿಸಿದ್ದ ಕೊರಿಯಾ ಆಡಿರುವ ನಾಲ್ಕು ಪಂದ್ಯಗಳಲ್ಲೂ ಜಯ ಗಳಿಸಿದೆ.
ಬಿ’ ಗುಂಪಿನಲ್ಲಿ ಇರಾನ್ ತಂಡ ಜಪಾನ್‌ನ್ನು 38-34 ಪಾಯಿಂಟ್‌ಗಳ ಅಂತರದಲ್ಲಿ ಸೋಲಿಸಿದೆ.
ಅ.18ರಂದು ಭಾರತ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ.
. .





