ರೋಗಿಗಳಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಸಿಗಲಿ: ಜಿಲ್ಲಾಧಿಕಾರಿ ಜಿ.ಸತ್ಯವತಿ
ಡಿ.ಎಸ್.ಕೃಷ್ಣಪ್ಪಗೌಡರ ಜನ್ಮ ಶತಮಾನೋತ್ಸವ

ಮೂಡಿಗೆರೆ, ಅ.16: ಶಿಬಿರಗಳನ್ನು ಮಾಡುವುದರ ಜೊತೆಗೆ ರೋಗಿಗಳಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡುವಂತೆ ಮಾಡಿದರೆ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಸಿಕ್ಕಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.
ಅವರು ದಿವಂಗತ ಡಿ.ಎಸ್.ಕೃಷ್ಣಪ್ಪಗೌಡರ ಜನ್ಮ ಶತಮಾನೋತ್ಸವ ಸಮಾರಂಭ ಸಮಿತಿ ವತಿಯಿಂದ ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಡಿ.ಎಸ್.ಕೃಷ್ಣಪ್ಪಗೌಡ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂರು ಹಾಸಿಗೆಯುಳ್ಳ ಆಸ್ಪತ್ರೆ ಇದ್ದರೂ ಸರಿಯಾದ ವೈದ್ಯಕೀಯ ಸಲಕರಣೆಗಳು ಇಲ್ಲದಿರುವುದರಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಇಂತಹ ಸಂದಭರ್ದಲ್ಲಿ ಉಚಿತ ತಪಾಸಣೆ ಶಿಬಿರಗಳು ರೋಗಿಗಳಿಗೆ ಅನುಕೂಲವಾಗುತ್ತವೆ ಎಂದರು.
ಕಣಚೂರು ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಕಣಚೂರು ಮೋಣು ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಯಾವುದೇ ಚಿಕಿತ್ಸೆ ನೀಡಿದರೂ ಉಚಿತ ಸೇವೆ ನೀಡಲಾಗುವುದು. ಗರ್ಭಿಣಿ ಸ್ತ್ರೀಯರಿಗೆ ಪ್ರಸೂತಿ ನಡೆದ ನಂತರ ಊಟ ಉಪಚಾರದೊಂದಿಗೆ ಮನೆಗೆ ಕಳುಹಿಸಲಾಗುವುದು. ಅದೇ ರೀತಿ ಜನನವಾದ ಮಗುವಿನ ಹೆಸರಿನಲ್ಲಿ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 1 ಸಾವಿರ ರೂ. ಠೇವಣಿ ನೀಡಲಾಗುತ್ತಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಮಾತನಾಡಿ, ಹಿರಿಯರ ಆದರ್ಶ ಗುಣಗಳನ್ನು ಪಾಲಿಸಿಕೊಂಡು ಮುಂದಿನ ಯುವ ಪೀಳಿಗೆಗೆ ಧಾರೆ ಎರೆಯುವ ನಿಟ್ಟಿನಲ್ಲಿ ಸಮಾಜ ಕಟ್ಟುವ ಕಾರ್ಯವನ್ನು ಮಾಡೋಣ. ಎಲ್ಲ ಸಾಮಾಜಿಕ ಕಾರ್ಯಗಳನ್ನು ಸರಕಾರವೇ ನೆರವೇರಿಸಲು ಸಾಧ್ಯವಿಲ್ಲ. ದಾನಿಗಳು ಮತ್ತು ಸಂಘ ಸಂಸ್ಥೆಗಳು ಸೇವೆಗೆ ಮುಂದೆ ಬರಬೇಕೆಂದು ಹೇಳಿದರು. ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ ತಮ್ಮ ತಂದೆ ಡಿ.ಎಸ್.ಕೃಷ್ಣಪ್ಪಗೌಡರು ಮಾಡಿರುವ ಸಮಾಜ ಸೇವೆ ಕಾರ್ಯಗಳನ್ನು ನೆನಪಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಡಿ.ಬಿ.ಸುಬ್ಬೇಗೌಡ ವಹಿಸಿದ್ದರು. ಶಾಸಕ ಬಿ.ಬಿ.ನಿಂಗಯ್ಯ ಮತ್ತು ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಮಾತನಾಡಿದರು.
ಕಣಚೂರು ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಶಿಬಿರಕ್ಕೆ ಸುಮಾರು 50ಕ್ಕೂ ಅಧಿಕ ವೃದ್ಯರು ಆಗಮಿಸಿ, 2 ಸಾವಿರಕ್ಕೂ ಅಧಿಕ ರೋಗಿಗಳನ್ನು ಪರಿಶೀಲಿಸಿದರು. 300ಕ್ಕೂ ಹೆಚ್ಚು ಜನರಿಗೆ ಕಣಚೂರು ಹೆಲ್ತ್ ಕಾರ್ಡ್ ನೀಡಿ ಮಂಗಳೂರಿನ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಿವುದಾಗಿ ಘೋಷಿಸಲಾಯಿತು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಕುಮಾರ್, ಸದಸ್ಯ ರಂಜನ್ ಅಜೀತ್ ಕುಮಾರ್, ಪ.ಪಂ. ಅಧ್ಯಕ್ಷೆ ರಮಿರಸಾಬಿ, ಉಪಾಧ್ಯಕ್ಷೆ ಪೂರ್ಣಿಮಾ ಮಲ್ಯ, ಡಾ.ರಘುರಾಮ್ ಅಡ್ಯಂತಾಯ, ಯು.ಆರ್.ಚಂದ್ರೇಗೌಡ, ಡಿ.ಕೆ.ಉದಯಶಂಕರ್, ಗೋಪಾಲಗೌಡ, ಬಿ.ಎಸ್.ಜಯರಾಂ ಗೌಡ, ಡಾ.ಸುಂದರೇಶ್, ಡಾ.ವಿರುಪಾಕ್ಷ ಮತ್ತಿತರರಿದ್ದರು.







