ಒಲಿಂಪಿಕ್ಸ್ ಓಟಗಾರ ಟೈಸನ್ ಪುತ್ರಿ ಗುಂಡೇಟಿಗೆ ಬಲಿ

ಲೆಕ್ಸಿಂಗ್ಟನ್, ಅ.16: ಒಲಿಂಪಿಕ್ಸ್ ಓಟಗಾರ ಟೈಸನ್ ಗೇ ಅವರ 15ರ ಹರೆಯದ ಪುತ್ರಿ ಕೆಂಟಕಿಯಲ್ಲಿ ನಡೆದ ಗುಂಡು ಹಾರಾಟ ಘಟನೆಯೊಂದರಲ್ಲಿ ಸಾವನ್ನಪ್ಪಿದ್ದಾರೆ.
ಟೈಸನ್ ಪುತ್ರಿ ಟ್ರಿನಿಟಿ ಗೇ ಕೆಂಟಕಿ ಯುನಿವರ್ಸಿಟಿ ಸೆಂಟರ್‌ನಲ್ಲಿ ಗುಂಡೇಟಿಗೆ ತುತ್ತಾಗಿದ್ದಾರೆ ಎಂದು ಅಥ್ಲೀಟ್ ಟೈಸನ್‌ರ ಏಜೆಂಟ್ ರವಿವಾರ ಸುದ್ದಿ ಸಂಸ್ಥೆಗೆ ಟೆಸ್ಟ್ ಮೆಸೇಜ್‌ನ ಮೂಲಕ ದೃಢಪಡಿಸಿದ್ದಾರೆ.
ರವಿವಾರ ಎರಡು ವಾಹನಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸ್ ಅಧಿಕಾರಿಗಳು ಒಂದು ವಾಹನವನ್ನು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಟ್ರಿನಿಟಿ ಗೇ ಯಾವ ವಾಹನದಲ್ಲಿದ್ದರು. ಈ ಘಟನೆಗೆ ಕಾರಣವೇನೆಂದು ಗೊತ್ತಾಗಿಲ್ಲ ಎಂದು ಪೊಲೀಸ್ ವಕ್ತಾರೆ ಬ್ರೆನ್ನಾ ಏಂಜೆಲ್ ತಿಳಿಸಿದ್ದಾರೆ.
ಟೈಸನ್ ಕಳೆದ 3 ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 4-100 ಮೀ. ರಿಲೇಯಲ್ಲಿ ಬೆಳ್ಳಿ ಪದಕ ಜಯಿಸಿದ್ದ ಅಮೆರಿಕ ತಂಡದ ಸದಸ್ಯರಾಗಿದ್ದರು. ಮೃತ ಟ್ರಿನಿಟಿ ಕೂಡ ಓಟಗಾರ್ತಿಯಾಗಿದ್ದು, ಮೇನಲ್ಲಿ ಶಾಲಾ ಮಟ್ಟದ 100 ಹಾಗೂ 200 ಮೀ.ಓಟದಲ್ಲಿ ಕ್ರಮವಾಗಿ 4,5ನೆ ಸ್ಥಾನ ಪಡೆದಿದ್ದರು.





