ವಾರಣಾಸಿ: ಕಾಲ್ತುಳಿತದ ಮರುದಿನ ಶಾಂತಿಯುತವಾಗಿ ನಡೆದ ಧರ್ಮಸಭೆ
ವಾರಣಾಸಿ, ಅ.16: ಭೀಕರ ಕಾಲ್ತುಳಿತಕ್ಕೆ ಇಲ್ಲಿ 25 ಮಂದಿ ಬಲಿಯಾದ ಒಂದು ದಿನದ ಬಳಿಕ, ಜೈಗುರುದೇವ ಧರ್ಮಪ್ರಚಾರಕ ಸಂಸ್ಥಾದ ಮುಖ್ಯಸ್ಥ ಪಂಕಜ್ ಮಹಾರಾಜ್ ರವಿವಾರ ಗಂಗಾ ತೀರದ ಡೋಮ್ರಿ ಗ್ರಾಮದಲ್ಲಿ ಭಾರೀ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ್ದಾರೆ.
ಮಾರಕ ಕಾಲ್ತುಳಿತಕ್ಕೆ ಕಾರಣವಾದ ಭಾರೀ ಜನಸಂದಣಿಯ ಬಗ್ಗೆ ಉಲ್ಲೇಖಿಸಿದ ಅವರು, ತಾವು ಕಾರ್ಯಕ್ರಮಕ್ಕೆ ಅನುಮತಿ ಕೇಳಿದ್ದೆವು. ಸುಮಾರು 3 ಸಾವಿರ ಮಂದಿ ಸೇರುವ ನಿರೀಕ್ಷೆಯಿತ್ತು. ಆದರೆ, ದೇಶದ ವಿವಿಧ ಭಾಗಗಳಿಂದ ಹೆಚ್ಚು ಹೆಚ್ಚು ಅನುಯಾಯಿಗಳು ಬಂದರೆ ತಾವೇನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಸಂಘಟಕರು 3 ಸಾವಿರ ಮಂದಿಯ ಸಮಾವೇಶಕ್ಕೆ ಅನುಮತಿ ಪಡೆದಿದ್ದರು. ಮುಂದಿನ ದಿನಗಳಲ್ಲಿ ಅನುಯಾಯಿಗಳ ಸಂಖ್ಯೆ ಮಿತಿ ಮೀರಲಿದೆ ಎಂದು ಪಂಕಜ್ ಮಹಾರಾಜ್ ಹೇಳಿದ್ದಾರೆ.
ರವಿವಾರದ ಸಭೆಗೆ ಅಂದಾಜು 1 ಲಕ್ಷ ಜನರು ಆಗಮಿಸಿದ್ದರು. ಶನಿವಾರದ ಘಟನೆಯಿಂದ ಪಾಠ ಕಲಿತ ಪೊಲೀಸರು ಜನ ಸಂದಣಿಯನ್ನು ಉತ್ತಮವಾಗಿ ನಿಯಂತ್ರಿಸಿದ್ದರು. ಪ್ರದೇಶದ ಸುತ್ತ ಭದ್ರತೆಗಾಗಿ ಜಿಲ್ಲಾಡಳಿತವು ಪ್ರಾದೇಶಿಕ ಸಶಸ್ತ್ರ ಬಲದ ನಿಯೋಜನೆ ಮಾಡಿತ್ತು.





