ಮುಂಬೈ ಹೊಸ್ತಿಲು ತಲುಪಿದ ಮರಾಠಾ ‘ವೌನ ಮೆರವಣಿಗೆ’
ಥಾಣೆ,ಅ.16: ಮೀಸಲಾತಿ ಸೇರಿದಂತೆ ತನ್ನ ಬೇಡಿಕೆಗಳ ಈಡೇರಿಕೆಗಾಗಿ ಮರಾಠಾ ಸಮುದಾಯವು ರಾಜ್ಯಾದ್ಯಂತ ನಡೆಸುತ್ತಿರುವ ಅಭಿಯಾನವು ಇಂದು ಮುಂಬೈ ಮಹಾನಗರದ ಹೊಸ್ತಿಲನ್ನು ತಲುಪಿದೆ. ನೆರೆಯ ಥಾಣೆ ಜಿಲ್ಲೆಯಲ್ಲಿ ನಡೆದ ಬೃಹತ್ ವೌನ ಮೆರವಣಿಗೆಯಲ್ಲಿ ಸಚಿವ ಏಕನಾಥ ಖಾಡ್ಸೆ ಹಾಗೂ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರು ಭಾಗವಹಿಸಿದ್ದರು.
ಶನಿವಾರ ಕೊಲ್ಲಾಪುರದಲ್ಲಿ ನಡೆದ ಮರಾಠಾ ಕ್ರಾಂತಿ ವೌನ ಮೆರವಣಿಗೆಯ ಬೆನ್ನಲ್ಲೇ ಇಂದು ಥಾಣೆಯ ತೀನ ಹಾತ್ ನಾಕಾದಲ್ಲಿ ಭಾರೀ ಸಂಖ್ಯೆಯಲ್ಲಿ ಸಮಾವೇಶಗೊಂಡ ಮರಾಠಾ ಸಮುದಾಯದ ಸದಸ್ಯರು ಐದು ಕಿ.ಮೀ. ದೂರದ ಜಿಲ್ಲಾಧಿಕಾರಿಗಳ ಕಚೇರಿಗೆ ವೌನ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಭಾಗಿಯಾಗಿದ್ದವರು ಕೇಸರಿ ಧ್ವಜಗಳೊಂದಿಗೆ ತಮ್ಮ ಬೇಡಿಕೆಗಳಿದ್ದ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು. ಮಕ್ಕಳು ಮತ್ತು ಹಿರಿಯರು ಮರಾಠಾ ದೊರೆ ಛತ್ರಪತಿ ಶಿವಾಜಿಯಂತೆ ದಿರಿಸು ಧರಿಸಿದ್ದರು. ಮಹಿಳೆಯರು ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಗುಂಪು ನಿಯಂತ್ರಣಕ್ಕಾಗಿ 1,500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.
ಇಂದಿನ ಜಾಥಾ ರಾಜ್ಯ ರಾಜಧಾನಿ ಮುಂಬೈಯಲ್ಲಿ ನಡೆಯಲಿರುವ ರ್ಯಾಲಿಗೆ ಮುನ್ನುಡಿ ಎನ್ನಲಾಗಿದೆ. ಸಮುದಾಯದ ಮುಖಂಡರು ಮುಂಬೈ ರ್ಯಾಲಿಯ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.





