ಏರಿಯಾ ಕಮಾಂಡರ್ ಸೇರಿದಂತೆ 10 ನಕ್ಸಲರ ಬಂಧನ
ನೊಯ್ಡ,ಅ.16: ಇಲ್ಲಿ ಮತ್ತು ಚಂದಾವುಲಿ ಜಿಲ್ಲೆಯಲ್ಲಿ ಏಕಕಾಲದಲ್ಲಿ ದಾಳಿಗಳನ್ನು ನಡೆಸಿದ ಉತ್ತರ ಪ್ರದೇಶ ಪೊಲೀಸರು ತನ್ನ ತಲೆಯ ಮೇಲೆ ಐದು ಲಕ್ಷ ರೂ. ಬಹುಮಾನವನ್ನು ಹೊತ್ತಿದ್ದ ಸ್ವಘೋಷಿತ ಏರಿಯಾ ಕಮಾಂಡರ್ ಸೇರಿದಂತೆ 10 ನಕ್ಸಲರನ್ನು ಬಂಧಿಸುವ ಮೂಲಕ ಮಹತ್ವದ ಯಶಸ್ಸನ್ನು ಸಾಧಿಸಿದ್ದಾರೆ. ಈ ವೇಳೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು, ಡಿಟೋನೇಟರ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಕ್ಸಲರ ಬಂಧನದೊಂದಿಗೆ ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸಂಭಾವ್ಯ ಭಾರೀ ದಾಳಿಗಳನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರಾತ್ರಿಯಿಡೀ ನಡೆದ ದಾಳಿ ಕಾರ್ಯಾಚರಣೆಗಳು ರವಿವಾರ ಬೆಳಗ್ಗೆಯವರೆಗೂ ಮುಂದುವರಿದಿದ್ದವು. ನೊಯ್ಡೆದಲ್ಲಿ ಒಂಬತ್ತು ಮತ್ತು ಬಿಹಾರಕ್ಕೆ ಹೊಂದಿಕೊಂಡಿರುವ ಚಂದಾವುಲಿಯಲ್ಲಿ ಓರ್ವ ನಕ್ಸಲನನ್ನು ಬಂಧಿಸಲಾಗಿದೆ ಎಂದು ಎಸ್‌ಟಿಎಫ್ ಐಜಿ ಅಸೀಮ್ ಅರುಣ್ ಸುದ್ದಿಗಾರರಿಗೆ ತಿಳಿಸಿದರು.
ಮಾಹಿತಿಯ ಮೇರೆಗೆ ಉ.ಪ್ರ. ಭಯೋತ್ಪಾದನೆ ನಿಗ್ರಹ ಪಡೆ ಮತ್ತು ಬೇಹು ಸಂಸ್ಥೆಗಳ ಅಧಿಕಾರಿಗಳು ಇಲ್ಲಿಯ ಸೆಕ್ಟರ್ 49ರಲ್ಲಿಯ ಅಪಾರ್ಟ್‌ಮೆಂಟ್‌ವೊಂದರ ಮೇಲೆ ದಾಳಿ ನಡೆಸಿದ್ದು, ಜಾರ್ಖಂಡ್‌ನ ಲಾತೇಹಾರ್ ಜಿಲ್ಲೆಯ ನಿವಾಸಿ ಪ್ರದೀಪ್ ಸಿಂಗ್ ಖರ್ವಾರ್ ಸೇರಿದಂತೆ ಒಂಬತ್ತು ನಕ್ಸಲರು ಸಿಕ್ಕಿ ಬಿದ್ದಿದ್ದಾರೆ. ಸ್ವಘೋಷಿತ ಏರಿಯಾ ಕಮಾಂಡರ್ ಆಗಿರುವ ಖರ್ವಾರ್ 2012, ಫೆಬ್ರವರಿಯಿಂದಲೂ ನೊಯ್ಡಾದಲ್ಲಿ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕಾಗಿ ಐದು ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.
ಈ ನಕ್ಸಲರು ಪೂರ್ವ ಉತ್ತರಪ್ರದೇಶ ಮತ್ತು ರಾಜ್ಯಕ್ಕೆ ಹೊಂದಿಕೊಂಡಿರುವ ಬಿಹಾರದ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದು, ನೊಯ್ಡಿವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದರು. ಆಸ್ತಿ ಮಾರಾಟಗಾರರ ಸೋಗಿನಲ್ಲಿ ಎರಡು ಬಾಡಿಗೆಯ ಫ್ಲಾಟ್‌ಗಳಲ್ಲಿ ವಾಸವಿದ್ದರು ಎಂದು ಅರುಣ್ ತಿಳಿಸಿದರು.
ನಕ್ಸಲರ ವಿರುದ್ಧ ದಾಳಿಗಳು ಮುಂದುವರಿಯಲಿದ್ದು, ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದರು.





