ಜ್ಯೋತಿಕಾ ಮತ್ತೆ ಬೆಳ್ಳಿತೆರೆಗೆ

ನಾಯಕಿಯಾಗಿ ಹಲವು ತಮಿಳು ಚಿತ್ರಗಳಲ್ಲಿ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ಜ್ಯೋತಿಕಾ, ತಮಿಳಿನ ಖ್ಯಾತ ನಟ ಸೂರ್ಯನನ್ನು ವಿವಾಹವಾದ ಬಳಿಕ ಸದ್ದಿಲ್ಲದೆ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದರು. ಆದರೆ ಕಳೆದ ವರ್ಷ ತೆರೆಕಂಡ ‘36 ವಯದಿನಿಲೆ’ ಚಿತ್ರದ ಮೂಲಕ ಮತ್ತೆ ಬಣ್ಣದ ಬದುಕಿಗೆ ವಾಪಸಾದರು.
‘36 ವಯದಿನಿಲೆ’ ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ತಾನೋರ್ವ ಅಪ್ಪಟ ಕಲಾವಿದೆಯೆಂಬುದನ್ನು ಜ್ಯೋತಿಕಾ ಮತ್ತೊಮ್ಮೆ ಸಾಬೀತುಪಡಿಸಿದ್ದರು. ಮಲಯಾಳಂನ ‘ಹೌ ಓಲ್ಡ್ ಆರ್ ಯು’ ಚಿತ್ರದ ರಿಮೇಕ್ ಆದ ಈ ಚಿತ್ರವನ್ನು ಚಿತ್ರಪ್ರೇಮಿಗಳು ತುಂಬುಹೃದಯದಿಂದ ಸ್ವಾಗತಿಸಿದ್ದರು.
ಇದೀಗ ಜ್ಯೋತಿಕಾ ಇನ್ನೊಂದು ತಮಿಳು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದಾರೆ. ‘ಮಗಳಿರ್ ಮಟ್ಟುಂ’ ಎಂದು ಹೆಸರಿಡಲಾದ ಈ ಚಿತ್ರದಲ್ಲಿ ಆಕೆ ‘ಡಾಕ್ಯುಮೆಂಟರಿ ಚಿತ್ರಗಳ ನಿರ್ದೇಶಕಿ’ಯಾಗಿ ಅಭಿನಯಿಸಲಿದ್ದಾರೆ.
ಉಲಗನಾಯಕನ್ ಕಮಲಹಾಸನ್ ನಿರ್ಮಿಸಿದ್ದ ಸೂಪರ್ ಹಿಟ್ ತಮಿಳುಚಿತ್ರದ ಟೈಟಲನ್ನೇ ಈ ಚಿತ್ರಕ್ಕೆ ಎರವಲು ಪಡೆಯಲಾಗಿದೆ.ಜ್ಯೋತಿಕಾ ಪತಿ ಸೂರ್ಯ ಕ್ರಿಸ್ಟಿ ಪಿಕ್ಚರ್ಸ್ ಸಂಸ್ಥೆಯ ಜೊತೆಗೂಡಿ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಮಹಿಳಾ ಕೇಂದ್ರಿತ ಕಥಾವಸ್ತುವನ್ನು ಹೊಂದಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಬ್ರಹ್ಮ ಅವರು ಆ್ಯಕ್ಷನ್, ಕಟ್ ಹೇಳಿದ್ದಾರೆ. ಹಿರಿಯ ನಟಿ ಭಾನುಪ್ರಿಯಾ, ಶರಣ್ಯ ಪೊನವನ್ನನ ಹಾಗೂ ಊರ್ವಶಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಗಿಬ್ರಾನ್ ಸಂಗೀತ ನೀಡಿರುವ ‘ಮಗಳಿರ್ ಮಟ್ಟುಂ’ನ ಅರ್ಧಭಾಗದಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ





