ಜನಪ್ರತಿನಿಧಿಗಳಿಂದ ಗಿರಿಜನರ ಕಡೆಗಣನೆ

ಎಸ್.ಕೆ.ಲಕ್ಷ್ಮೀಶ್ ಮಡಿಕೇರಿ
ಮಡಿಕೇರಿ, ಅ.16: ಪ್ರಕೃತಿಯೊಂದಿಗೆ ಭಾವನಾತ್ಮಕವಾಗಿ ಬದುಕು ಸಾಗಿಸುತ್ತಿರುವ ಆದಿವಾಸಿಗಳ ಅಭ್ಯುದಯಕ್ಕೆಂದು ಜಾರಿಗೆ ತಂದಿರುವ ಆದಿವಾಸಿಗಳ ಅರಣ್ಯ ಹಕ್ಕು ಮಸೂದೆ ಜಾರಿಗೆ ಬಂದು 10 ವರ್ಷಗಳು ಕಳೆದಿದ್ದರೂ ಇದರ ಲಾಭ ಮಾತ್ರ ನೈಜ ಫಲಾನುಭವಿಗಳ ಪಾಲಿಗೆ ಗಗನ ಕುಸುಮವಾದಂತಾಗಿದೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಅಧೀನದ ಅರಣ್ಯ ಇಲಾಖೆಯೇ ಅಡ್ಡಿಯಾಗಿದೆ. ಕೇಂದ್ರ ಸರಕಾರ ಬಲಗೈಯಲ್ಲಿ ನೀಡಿದಂತೆ ಮಾಡಿ ಅರಣ್ಯ ಇಲಾಖೆ ಮೂಲಕ ಎಡಗೈಯಲ್ಲಿ ಕಸಿದುಕೊಳ್ಳುವ ಯತ್ನ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಕೊಡಗು ಜಿಲ್ಲೆಯಲ್ಲಿ ಸುಮಾರು 58 ಸಾವಿರ ಆದಿವಾಸಿ ಜನರಿದ್ದಾರೆ. ಬೆಟ್ಟಕುರುಬ, ಜೇನುಕುರುಬ, ಪಣಿಯ, ಯರವ, ಅಡಿಯ, ಕುಡಿಯ, ಮಲೆಕುಡಿಯ, ಕೊರಗ, ಬೆಟ್ಟ ಕುರುಬಸೋಲಿಗ ಸೇರಿದಂತೆ ಸುಮಾರು 40 ಪಂಗಡದವರಿದ್ದಾರೆ. ಪ್ರಾಣಿ, ಪಕ್ಷಿಗಳ ವಾಸ ಆರಂಭವಾದಾಗಿನಿಂದ ಅರಣ್ಯ ಪ್ರದೇಶದಲ್ಲಿ ಮತ್ತು ಅರಣ್ಯದ ಅಂಚಿನಲ್ಲಿ ಇವರು ವಾಸಿಸುತ್ತಿದ್ದಾರೆ. ಆದರೆ, ಪ್ರಕೃತೀಕರಣ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ನೆಪವೊಡ್ಡಿ ಅರಣ್ಯ ಇಲಾಖೆ ಆದಿವಾಸಿಗಳನ್ನು ಅರಣ್ಯ ಭಾಗದಿಂದ ಒಕ್ಕಲೆಬ್ಬಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಲಾಗಿದೆ.
ಪ್ರಾಣಿಪಕ್ಷಿಗಳೊಂದಿಗೆ ಬೆಳೆದ ಇವರು ಕಾಡಿನಲ್ಲಿರುವಾಗಲೇ ಹುಲಿ ಸಂರಕ್ಷಿತ ಪ್ರದೇಶ ಅಥವಾ ವನ್ಯಜೀವಿ ಸಂರಕ್ಷಣಾ ಪ್ರದೇಶವೆಂದು ಘೋಷಿಸುವ ಮೂಲಕ ಪರೋಕ್ಷವಾಗಿ ಗಿರಿಜನರನ್ನು ಕಾಡು ಬಿಡಿ ಎಂದು ಆಜ್ಞಾಪಿಸಲಾಗಿದೆ. ಆದರೆ, ಈ ನಡುವೆ ಆದಿವಾಸಿಗಳ ಉದ್ಧಾರಕ್ಕೆಂದು ಅರಣ್ಯ ಹಕ್ಕು ಮಸೂದೆ ಜಾರಿಗೆ ತಂದು ಗೊಂದಲ ಸೃಷ್ಟಿಸಲಾಗಿದೆ. ಕಾಯ್ದೆ ಜಾರಿಯಾಗಿದೆಯೇ ಹೊರತು ಯಾವುದೇ ಹಕ್ಕುಗಳನ್ನು ಪಡೆಯುವ ಸ್ವಾತಂತ್ರ್ಯ ಆದಿವಾಸಿಗಳಿಗೆ ಇಲ್ಲದಾಗಿದೆ. ಒಕ್ಕಲೆಬ್ಬಿಸುವ ಪ್ರಯತ್ನಗಳಿಗೆ ಸರಕಾರವೇ ನೇರ ಹೊಣೆಯಾಗಿರುವಾಗ ಅರಣ್ಯ ಹಕ್ಕು ನೀಡುತ್ತೇವೆ ಎನ್ನುವ ಕಾಯ್ದೆಯ ಜಾರಿಯಾದರೂ ಯಾಕೆ ಬೇಕಿತ್ತು ಎಂದು ಬುಡಕಟ್ಟು ಜನರು ಪ್ರಶ್ನಿಸುತ್ತಿದ್ದಾರೆ. ಬುಡಕಟ್ಟು ಸಮುದಾಯದವರನ್ನು ನಿರ್ಲಕ್ಷಿಸಿರುವ ಸರಕಾರಗಳು ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಹಾಗೂ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸುತ್ತಿವೆ. ಈ ಮೂಲಕ ಬುಡಕಟ್ಟು ಸಮುದಾಯದ ಪಾರಂಪರಿಕ ಬದುಕಿಗೆ ಧಕ್ಕೆ ಉಂಟು ಮಾಡುತ್ತಿವೆ. ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಭೂಮಿಯ ಹಕ್ಕು ನೀಡುವ ಹಕ್ಕುಪತ್ರ ವಿತರಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಕಾಳಜಿ ವಹಿಸಿಲ್ಲ.







