‘ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾಕ್ಕೆ ಮೂಹೂರ್ತ
ಬ್ರಹ್ಮಾವರ, ಅ.16: ನಾಗೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ಕಡಂದಲೆ ಸುರೇಶ್ ಎಸ್. ಭಂಡಾರಿ ನಿರ್ಮಾಣದ ಜೈಪ್ರಸಾದ್ ಬಜಾಲ್ ನಿರ್ದೇಶನದ ‘ಅಂಬರ್ ಕ್ಯಾಟರರ್ಸ್’ ತುಳು ಚಿತ್ರದ ಚಿತ್ರೀಕರಣಕ್ಕೆ ರವಿವಾರ ಬಾರ್ಕೂರು ಕಚ್ಚೂರು ನಾಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಕನ್ನಡದ ನಿರ್ದೇಶಕ ಎಂ.ಡಿ.ಶ್ರೀಧರ್ ಕ್ಲಾಪ್ ಮಾಡಿದರು. ನಾಯಕ ಸೌರಭ್ ಎಸ್.ಭಂಡಾರಿ ದೇವಸ್ಥಾನಕ್ಕೆ ಬರುವ ದೃಶ್ಯವನ್ನು ಕ್ಯಾಮರಮ್ಯಾನ್ ಸಂತೋಷ್ ರೈ ಪಾತಾಜೆ ಚಿತ್ರೀಕರಿಸಿದರು.
ಚಿತ್ರದಲ್ಲಿ ಸಿಂಧು ಲೋಕನಾಥ್ ಸೌರಭ್ ಜೋಡಿಯಾಗಿ ನಟಿಸುತ್ತಿದ್ದು, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ಸಿಲ್ಲಿ ಲಲ್ಲಿ ಖ್ಯಾತಿಯ ಸುನೇತ್ರ ಪಂಡಿತ್ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಯುವ ನಿರ್ದೇಶಕ ಜೈಪ್ರಸಾದ್ ಬಜಾಲ್ ಕಥೆ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ನೀಡಲಿದ್ದಾರೆ. ಒಟ್ಟು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಎಪ್ರಿಲ್‌ನಲ್ಲಿ ಸಿನೆಮಾ ತೆರೆಕಾಣಲಿದೆ ಎಂದು ನಿರ್ಮಾಪಕ ಸುರೇಶ್ ಭಂಡಾರಿ ತಿಳಿಸಿದ್ದಾರೆ.
ನಿರ್ದೇಶಕ ಎಚ್.ವಾಸು, ಸುಧಾಕರ ಬನ್ನಂಜೆ, ಪತ್ರಕರ್ತರಾದ ಜಗನ್ನಾಥ ಶೆಟ್ಟಿ ಬಾಳ, ರೋನ್ಸ್ ಬಂಟ್ವಾಳ್, ಶೋಭಾ ಸುರೇಶ್ ಭಂಡಾರಿ, ಡಾ.ಶಿವರಾಮ ಕೆ.ಭಂಡಾರಿ, ಸದಾಶಿವ ಭಂಡಾರಿ ಸಕಲೇಶಪುರ, ಎನ್.ನವೀನ್ ಭಂಡಾರಿ, ನಿರ್ದೇಶಕ ಜೈಪ್ರಸಾದ್ ಬಜಾಲ್, ಸಂತೋಷ್ ರೈ ಪಾತಾಜೆ, ಕಚ್ಚೂರು ನಾಗೇಶ್ವರ ದೇವಸ್ಥಾನ ಪ್ರ.ಕಾರ್ಯದರ್ಶಿ ಸೋಮಶೇಖರ ಭಂಡಾರಿ, ಸತೀಶ್ ಬ್ರಹ್ಮಾವರ, ಶೇಖರ್ ಭಂಡಾರಿ ಉಪಸ್ಥಿತರಿದ್ದರು.





