ರಿಷಭ್ ತ್ರಿಶತಕ ದಾಖಲಿಸಿದ ಎರಡನೆ ವಿಕೆಟ್ ಕೀಪರ್
ಮುಂಬೈ, ಅ.16: ದಿಲ್ಲಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ತ್ರಿಶಕ(308) ದಾಖಲಿಸುವುದರೊಂದಿಗೆ ರಣಜಿ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿರುವ ಎರಡನೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಐತಿಹಾಸಿಕ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿರುದ್ಧದ ಗ್ರೂಪ್‘ಬಿ’ ಪಂದ್ಯದಲ್ಲಿ ರಿಷಭ್ ತ್ರಿಶತಕದ ಸಾಧನೆ ಮಾಡಿದ್ದಾರೆ.
19ರ ಹರೆಯದ ದಿಲ್ಲಿ ಬ್ಯಾಟ್ಸ್‌ಮನ್ 326 ಎಸೆತಗಳಲ್ಲಿ 42 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಲ್ಲಿ 308 ರನ್ ಗಳಿಸಿ ಔಟಾದರು. ಈ ಮೊದಲು ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ತ್ರಿಶತಕದ ಸಾಧನೆ ಮಾಡಿದ್ದರು. ರಾಹುಲ್ 2015 , ಜನವರಿ 29ರಂದು ಉತ್ತರ ಪ್ರದೇಶ ವಿರುದ್ಧದ ನಡೆದ 337 ರನ್(448ಎ) ಗಳಿಸಿದ್ದರು.
ರಿಷಭ್ ದಿಲ್ಲಿ ರಣಜಿ ತಂಡದ ಪರ ಗರಿಷ್ಠ ರನ್ ದಾಖಲಿಸಿದ ಎರಡನೆ ಬ್ಯಾಟ್ಸ್‌ಮನ್. 1994ರಲ್ಲಿ ರಮಣ್ ಲಂಬಾ ಅವರು ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 312 ರನ್ ಗಳಿಸಿದ್ದರು.
ರಿಷಭ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ದಾಖಲಿಸಿದ ವಿಶ್ವದ ಏಳನೆ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.





