ಪಾಕಿಸ್ತಾನದಲ್ಲಿ ಬಸ್‌ಗಳ ಡಿಕ್ಕಿ:ಕನಿಷ್ಠ 27 ಸಾವು
60ಕ್ಕೂ ಅಧಿಕ ಜನರಿಗೆ ಗಾಯ

ಲಾಹೋರ,17: ಪಾಕಿಸ್ತಾನದ ಪಂಜಾಬ್ ಪ್ರಾಂತದ ರಹೀಂ ಯಾರ್ ಖಾನ್‌ನ ಖಾನ್‌ಪುರ ಪ್ರದೇಶದಲ್ಲಿ ಸೋಮವಾರ ಎರಡು ಪ್ರಯಾಣಿಕ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 27 ಜನರು ಮೃತಪಟ್ಟಿದ್ದು, ಇತರ 60ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿಯಿದೆ.
ಒಂದು ಬಸ್ ಬಹಾವಲಪುರದಿಂದ ಫೈಸಲಾಬಾದ್‌ಗೆ ತೆರಳುತ್ತಿದ್ದರೆ ಇನ್ನೊಂದು ಬಸ್ ಕರಾಚಿಯಿಂದ ರಹೀಂ ಯಾರ್ ಖಾನ್‌ಗೆ ಹೋಗುತ್ತಿತ್ತು ಎಂದು ರಕ್ಷಣಾ ಸೇವೆಗಳ ವಕ್ತಾರರಾದ ದೀಬಾ ಶಹನಾಝ್ ತಿಳಿಸಿದರು.
ಬಸ್ಸುಗಳ ಅತಿವೇಗ ಅಪಘಾತಕ್ಕೆ ಕಾರಣವೆನ್ನಲಾಗಿದೆ. ನಜ್ಜುಗುಜ್ಜಾಗಿದ್ದ ಬಸ್ಸುಗಳಿಂದ ಮೃತದೇಹಗಳು ಮತ್ತು ಗಾಯಾಳುಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಕರ್ತರು ಹರಸಾಹಸ ಪಡಬೇಕಾಯಿತು.
ಗಾಯಾಳುಗಳನ್ನು ಖಾನ್‌ಪುರ ಮತ್ತು ರಹೀಂ ಯಾರ್ ಖಾನ್‌ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ.
ದುರಂತದ ಬಗ್ಗೆ ತೀವ್ರ ಶೋಕವನ್ನು ವ್ಯಕ್ತಪಡಿಸಿರುವ ಪ್ರಧಾನಿ ನವಾಝ್ ಶರೀಫ್ ಅವರು ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.







