ಕಳೆದೊಂದು ವಾರದಿಂದ ಜಯಲಲಿತಾರ ಕುರಿತು ಪ್ರಕಟಣೆ ಹೊರಡಿಸದ ಆಸ್ಪತ್ರೆ

ಚೆನ್ನೈ,ಅ.17: ಅನಾರೋಗ್ಯದಿಂದಾಗಿ ಇಲ್ಲಿಯ ಅಪೋಲೊ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕಳೆದೊಂದು ವಾರದಿಂದ ಆಸ್ಪತ್ರೆಯು ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಅವರ ಎಡಿಎಂಕೆ ಪಕ್ಷವೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ತನ್ಮಧ್ಯೆ ಜಯಲಲಿತಾರ ಆರೋಗ್ಯದ ಬಗ್ಗೆ ವದಂತಿಗಳನ್ನು ಹರಡುವುದರ ವಿರುದ್ಧ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸೈಬರ್ ತಜ್ಞರ ತಂಡವೊಂದು ಸಾಮಾಜಿಕ ಮಾಧ್ಯಮ ಗಳಲ್ಲಿ ವದಂತಿಗಳು ಅಥವಾ ಸುಳ್ಳು ಮಾಹಿತಿಗಳನ್ನು ಹರಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಿದೆ. ಅಪರಾಧ ರುಜುವಾತಾದರೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಕಳೆದ ಕೆಲವು ವಾರಗಳಲ್ಲಿ ಇಂತಹ 50 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಕೊಂಡಿರುವ ಪೊಲೀಸರು ಕೊಯಮತ್ತೂರಿನ ಇಬ್ಬರು ಬ್ಯಾಂಕ್ ಉದ್ಯೋಗಿಗಳು ಸೇರಿ ದಂತೆ ಎಂಟು ಜನರನ್ನು ಬಂಧಿಸಿದ್ದಾರೆ.
Next Story





