ಹಿಜಾಬ್ ಧರಿಸಿದ ವೆರ್ಮಾಂಟ್ ಮಿಲಿಟರಿ ಕಾಲೇಜಿನ ಪ್ರಪ್ರಥಮ ವಿದ್ಯಾರ್ಥಿನಿ ಸನಾ ಹಂಝಿ

ನಾರ್ತ್ ಫೀಲ್ಡ್, ಅ.17: ಸನಾ ಹಂಝೆ ಎಂಬಾಕೆ ಅಮೆರಿಕಾದ ಅತ್ಯಂತ ಹಳೆಯ ಖಾಸಗಿ ಮಿಲಿಟರಿ ಕಾಲೇಜಿನಲ್ಲಿ ಮಿಲಿಟರಿ ಕ್ಯಾಪ್ ಅಡಿಯಲ್ಲಿ ಶಿರವಸ್ತ್ರ ಅಥವಾ ಹಿಜಾಬ್ ಧರಿಸಲು ಅನುಮತಿ ಪಡೆದಿರುವ ಪ್ರಥಮ ಮುಸ್ಲಿಮ್ ಮಹಿಳೆಯಾಗಿದ್ದರೂ ಈ ಬಗ್ಗೆ ಆಕೆ ತಾನೇನೋ ದೊಡ್ಡ ಸಾಧನೆ ಮಾಡಿದ್ದೇನೆ ಎಂದುಕೊಂಡಿಲ್ಲ. ಆಕೆಯ ಸಂಪೂರ್ಣ ಗಮನ ಈಗ ವರ್ಮೊಂಟ್ ನಗರದ ನಾರ್ವಿಚ್ ವಿಶ್ವವಿದ್ಯಾನಿಲಯದ ಕಾರ್ಪ್ಸ್ ಆಫ್ ಕ್ಯಾಡೆಟ್ಸ್ ವಿಭಾಗದಲ್ಲಿ ಬೇರೆಲ್ಲಾ ನಿಯಮಗಳನ್ನು ಪಾಲಿಸುವತ್ತ ಇದೆ.
ಬೇರೆಲ್ಲಾ ಕಾರ್ಪ್ಸ್ ಸದಸ್ಯರಂತೆ ಆಕೆ ಕಠಿಣ ಪರಿಶ್ರಮಪಡುತ್ತಿದ್ದು, ತನ್ನ ತರಗತಿ ಮಾನ್ಯತೆ ಪಡೆದು ಅವರೆಲ್ಲಾ ಕಾರ್ಪ್ಸ್ ಆಫ್ ಕೆಡೆಟ್ಸ್ ಇದರ ಅಧಿಕೃತ ಸದಸ್ಯರಾಗುವ ದಿನಕ್ಕಾಗಿ ಎದುರು ನೋಡುತ್ತಿದ್ದಾಳೆ. ತನ್ನ ಕುಟುಂಬದ ಸಂಪ್ರದಾಯದಂತೆ ಆಕೆ ಕೂಡ ಮಿಲಿಟರಿಯಲ್ಲಿ ಉನ್ನತ ತರಬೇತಿ ಹೊಂದಿ ಆದರ್ಶಪ್ರಾಯಳಾಗವೇಕೆಂಬ ಹುಮ್ಮಸ್ಸಿನಲ್ಲಿದಾಳೆ. ಸಮವಸ್ತ್ರದೊಂದಿಗೆ ಹಿಜಾಬ್ ಕೂಡ ಧರಿಸಲು ಅನುಮತಿ ನೀಡುವ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು ಆಕೆ ಹಲವೆಡೆ ಅರ್ಜಿ ಹಾಕಿದ್ದು, ದೇಶದ ಅತ್ಯಂತ ಹಳೆಯ ಮಿಲಿಟರಿ ಕಾಲೇಜುಗಳಲ್ಲೊಂದಾದ ನಾರ್ವಿಚ್ ಆಕೆಗೆ ಪ್ರವೇಶಾತಿ ನೀಡಲು ಅನುಮತಿಸಿತ್ತು.
ಹಂಝೆಯ ಮುತ್ತಜ್ಜಿ ವಾಯುಪಡೆಯಲ್ಲಿದ್ದು ಆಕೆಯ ಇಬ್ಬರು ತಾತಂದಿರು ಪ್ಯೂರ್ಟೊರಿಕೋದಲ್ಲಿ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪರಿಚಿತರಾಗಿದ್ದರು. ಆಕೆಯ ತಂದೆ ಫ್ಲೋರಿಡಾದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಸಾರ್ವಜನಿಕವಾಗಿ ಹಿಜಾಬ್ ಧರಿಸಿ ತಿರುಗಾಡಿದಾಗ ಹಲವರ ಕೆಂಗಣ್ಣಿಗೆ ತಾನು ಗುರಿಯಾಗಿದ್ದೆನೆಂದು ಹೇಳುವ ಹಂಝೆ, ನಾರ್ವಿಚ್ ಸಂಸ್ಥೆಯಲ್ಲಿ ಮಾತ್ರ ತನಗೆ ಅಂತಹ ಯಾವುದೇ ಅನುಭವವಾಗಿಲ್ಲ ಎಂದಿದ್ದಾಳೆ.
ಆಕೆ ನಾರ್ವಿಚ್ ವಿಶ್ವವಿದ್ಯಾನಿಲಯಕ್ಕೆ ಸೇರುವ ಮುನ್ನದಿ ಸಿಟ್ಯಾಡಲ್, ಚಾರ್ಲ್ಸ್ ಸ್ಟನ್, ದಕ್ಷಿಣ ಕ್ಯಾರೋಲಿನಾ ಮಿಲಿಟರಿ ಕಾಲೇಜಿಗೆ ಸೇರಬಯಸಿದ್ದಾಗ ಸಂಸ್ಥೆ ತನ್ನ ಸಮವಸ್ತ್ರದ ಭಾಗವಾಗಿ ಆಕೆಗೆ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿತ್ತು.





