ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ: ಕೇಂದ್ರ-ದಿಲ್ಲಿ ಸರಕಾರಗಳಿಗೆ ನೋಟಿಸ್

ಹೊಸದಿಲ್ಲಿ, ಅ.17: ಪ್ರತಿ ಚಲನಚಿತ್ರದ ಆರಂಭಕ್ಕೆ ಮೊದಲು ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯಗೊಳಿಸಿ ನಿರ್ದೇಶನ ನೀಡುವಂತೆ ಕೋರಿರುವ ಅರ್ಜಿಯೊಂದರ ಸಂಬಂಧ ದಿಲ್ಲಿ ಹೈಕೋರ್ಟ್ ಇಂದು, ಕೇಂದ್ರ ಹಾಗೂ ದಿಲ್ಲಿ ಸರಕಾರಗಳ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಹಾಗೂ ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್‌ರನ್ನೊಳಗೊಂಡ ಪೀಠವೊಂದು, ಮುಂದಿನ ವಿಚಾರಣಾ ದಿನವಾದ ಡಿ. 14ರೊಳಗೆ ಉತ್ತರಿಸುವಂತೆ ಸೂಚಿಸಿ ಕೇಂದ್ರ ಹಾಗೂ ಎಎಪಿ ಸರಕಾರಗಳಿಗೆ ನೋಟಿಸ್ ನೀಡಿದೆ.
ಪ್ರಕೃತ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿರುವ ಹರ್ಷ ನಾಗರ್ ಎಂಬ ಕಾನೂನು ಪದವೀಧರ ಈ ಅರ್ಜಿ ದಾಖಲಿಸಿದ್ದರು.
ಮಹಾರಾಷ್ಟ್ರ ಹಾಗೂ ದಕ್ಷಿಣದ ಕೆಲವು ರಾಜ್ಯಗಳಲ್ಲಿ, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವ ಪದ್ಧತಿಯಿತ್ತೆಂದು ಅವರು ಪ್ರತಿಪಾದಿಸಿದ್ದಾರೆ.
Next Story





