ವಡೋದರಾ: ಸ್ನಾನಗೃಹದಲ್ಲಿ ಮೊಸಳೆ; ನದಿಗೆ ಬಿಡುಗಡೆ

ವಡೋದರಾ, ಅ.17: ಇಲ್ಲಿನ ಸೊಸೈಟಿಯೊಂದರ ಮನೆಯ ಸ್ನಾನಗೃಹದಲ್ಲಿ 2 ಅಡಿ ಉದ್ದದ ಮೊಸಳೆಯೊಂದು ಪತ್ತೆಯಾಗಿದೆ. ಅದನ್ನಿಂದು ವಿಶ್ವಾಮಿತ್ರಿ ನದಿಯಲ್ಲಿ ಬಿಡಲಾಗಿದೆಯೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಾಪ್‌ನಗರದ ದಾಭೋಯಿ ರಸ್ತೆಯ ಸೊಸೈಟಿಯಲ್ಲಿ ಶನಿವಾರ ರಾತ್ರಿ ಈ ಮೊಸಳೆ ಕಾಣಿಸಿಕೊಂಡಿದೆ. ಅದನ್ನಿಂದು ನದಿಗೆ ಬಿಡಲಾಗಿದೆಯೆಂದು ವಡೋದರಾ ವಲಯ ಅರಣ್ಯಾಧಿಕಾರಿ ಜಿ. ಚೌಹಾಣ್ ಪಿಟಿಐಗೆ ಹೇಳಿದ್ದಾರೆ.
11ನೆ ತರಗತಿಯ ವಿದ್ಯಾರ್ಥಿನಿ ನಿಧಿ ಪಟೇಲ್ ಎಂಬಾಕೆಗೆ ಮನೆಯ ಕಡೆ ಬರುತ್ತಿದ್ದ ಮೊಸಳೆ ಕಾಣಿಸಿತು. ಮನೆಯಲ್ಲಿ ಅವಳೊಬ್ಬಳೇ ಇದ್ದುದರಿಂದ ನೆರೆಮನೆಯವರನ್ನು ಕರೆದಳೂ. ಮೊಸಳೆ ಸ್ನಾನದ ಮನೆ ಪ್ರವೇಶಿಸುತ್ತಿದ್ದಂತೆ ನಿಧಿ ಬಾಗಿಲನ್ನು ಮುಚ್ಚಿ ಬೊಬ್ಬೆ ಹೊಡೆದಳು.
ಹತ್ತಿರದಿಂದ ಹೋಗುತ್ತಿದ್ದ ಯುವಕನೊಬ್ಬ ವಡೋದರಾ ನಗರಪಾಲಿಕೆಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದನು. ಅಗ್ನಿಶಾಮಕ ದಳದವರು, ಪ್ರಾಣಿ ರಕ್ಷಕರು ಹಾಗೂ ಅರಣ್ಯಾಧಿಕಾರಿಗಳನ್ನೊಳಗೊಂಡ ತಂಡ ಸ್ಥಳಕ್ಕೆ ಧಾವಿಸಿ ಅರ್ಧ ತಾಸಿನಲ್ಲಿ ಮೊಸಳೆಯನ್ನು ಹಿಡಿಯಿತು. ನಿನ್ನೆ ಅದು ಅರಣ್ಯ ಇಲಾಖೆಯ ವಶದಲ್ಲಿತ್ತೆಂದು ಚೌಹಾಣ್ ವಿವರಿಸಿದ್ದಾರೆ.





