ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಖಂಡಿಸಿ ಬಿಜೆಪಿ ಯುವಮೋರ್ಚಾದಿಂದ ಧರಣಿ

ಮಂಗಳೂರು,ಅ.17: ಬೆಂಗಳೂರಿನಲ್ಲಿ ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿ ಹಿಂತಿರುಗುವ ಸಂದರ್ಭದಲ್ಲಿ ಹತ್ಯೆಗೊಳಗಾದ ಆರ್.ರುದ್ರೇಶ್ ಹತ್ಯೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಯುವಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಹಿಂದುಗಳ ಮೇಲೆ ದಾಳಿ ಹೆಚ್ಚಾಗುತ್ತಲೇ ಇದೆ. ಬಹುಸಂಖ್ಯಾತರಾದ ಹಿಂದೂಗಳು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇದೀಗ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್‌ರ ಹತ್ಯೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಸರಕಾರ ತಕ್ಷಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು. ಅಲ್ಲದೆ ರುದ್ರೇಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿರಾಜ್ ಯು.ಬಂಗೇರ, ಜಿಲ್ಲಾ ಪದಾದಿಕಾರಿಗಳಾದ ಸಂದೀಪ್ ಶೆಟ್ಟಿ ಮರವೂರು, ಭರತ್ ಈಶ್ವರಮಂಗಲ, ಕಿಶೋರ ಬಾಬು, ದಯಾನಂದ ಕೊಣಾಜೆ, ಸುದರ್ಶನ ಪೂಜಾರಿ, ಸುಜೀತ್ ಮಾಡೂರು, ಯಶಪಾಲ್, ಸುನೀಲ್, ಅನೀಸ್, ಅಭಿಲಾಷ ಶೆಟ್ಟಿ, ರಕ್ಷಿತ್ ಶೆಟ್ಟಿ, ಲೋಹಿತ್ ಪೂಜಾರಿ, ದೇವಿಕಿರಣ್ ಕುಲಾಲ್, ಸಂತೋಷ್ ಕೈಕರ, ಸಂತೋಷ ಬಂಟ್ವಾಳ, ನಂದನ ಮಲ್ಯ, ಸಚಿನ್ ಶೆಟ್ಟಿ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.







