ದೇಶದ್ರೋಹ ಕಾನೂನು ದುರ್ಬಳಕೆಯಾಗಿರುವುದೇ ಹೆಚ್ಚು: ವರದೇಶ್ ಹಿರೇಗಂಗೆ

ಮಂಗಳೂರು,ಅ.17;ದೇಶ ದ್ರೋಹದ ಕಾನೂನು ದೇಶದಲ್ಲಿ ಬಳಕೆಯಾಗಿರುವುದಕ್ಕಿಂತ ಹೆಚ್ಚು ದುರ್ಬಳಕೆಯಾಗುತ್ತಿದೆ ಎಂದು ಮಣಿಪಾಲ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ವರದೇಶ ಹಿರೇಗಂಗೆ ತಿಳಿಸಿದರು.
ಅವರು ಇಂದು ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿ ಪಿಯುಸಿಎಲ್‌ನ 40ನೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡ ‘ದೇಶದ್ರೋಹ ಕಾನೂನು ಸರಕಾರದಿಂದ ಬಳಕೆ, ದುರ್ಬಳಕೆ’ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಭಾರತ ಬ್ರಿಟೀಷರ ವಸಾಹತು ರಾಷ್ಟ್ರವಾಗಿದ್ದ ಕಾಲದಲ್ಲಿ ಈ ದೇಶದ ಮೇಲೆ ನಿಯಂತ್ರಣ ಸಾಧಿಸಲು ಬ್ರಿಟೀಷರು ದೇಶ ದ್ರೋಹ ಕಾನೂನು ಜಾರಿ ತಂದರು. ಆ ಕಾಲದಲ್ಲಿ ಬ್ರಿಟೀಷರು ಜಾರಿಗೆ ತಂದಿರುವುದರಲ್ಲಿ ಆಶ್ಚರ್ಯವಿಲ್ಲ. ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದ ಬಾಲಗಂಗಾಧರ ತಿಲಕ್, ಗಾಂಧೀಜಿ, ಅರವಿಂದ ಘೋಷ್‌ರ ಮೇಲೆ ಬ್ರಿಟೀಷರು ದೇಶದ್ರೋಹದ ಕಾನೂನನ್ನು ಹಾಕಿದ್ದಾರೆ. ಆಗ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಈಗ ಈ ರೀತಿಯ ಕಾನೂನಿನ ಅಗತ್ಯವಿದೆಯೇ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ ಯಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ಕಾನೂನನ್ನು ಬಳಕೆಮಾಡಿ ದೇಶದಲ್ಲಿದ್ದ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು. ಪ್ರಜಾಪ್ರಭುತ್ವದಲ್ಲಿ ಸರಕಾರ ಎಡವಿದಾಗ ಸರಕಾರದ ವಿರುದ್ಧ ಧ್ವನಿ ಎತ್ತಿದರೆ ಅದು ಹೇಗೆ ದೇಶ ದ್ರೋಹವಾಗುತ್ತದೆ ಎಂದು ವರದೇಶ್ ಹಿರೇಗಂಗೆ ಪ್ರಶ್ನಿಸಿದರು.
ದೇಶದ್ರೋಹ ಕಾನೂನು ರದ್ದಾಗಬೇಕು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗದಂತೆ ಇರಬೇಕಾದರೆ ಭಾರತೀಯ ದಂಡ ಸಂಹಿತೆ 124(ಎ) (ದೇಶದ್ರೋಹ ಕಾನೂನು) ರದ್ದಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ತಿಳಿಸಿದರು.
ದೇಶದ ಹಾಗೂ ಜನರ ಅಭಿವೃದ್ಧಿಗೆ ಪೂರಕವಾದ ಕಾನೂನುಗಳಿರಬೇಕು ಹೊರತು, ಜನರ ಹಕ್ಕನ್ನು ಕಸಿದುಕೊಳ್ಳುವ ಕಾನೂನಿನ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಬೇಕಾಗಿದೆ. ದಿಲ್ಲಿಯ ಕನ್ಹಯ್ಯ ಈ ವಿಚಾರವನ್ನು ಎತ್ತಿರುವುದು ಸರಿಯಾಗಿದೆ ಎಂದು ಚಂಗಪ್ಪ ತಿಳಿಸಿದರು.
ಸಮಾರಂಭದಲ್ಲಿ ಪಿಯುಸಿಎಲ್ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ ಮಾತನಾಡಿ, ಜಿಲ್ಲೆಯಲ್ಲಿ ಪಿಯುಸಿಎಲ್ ಸಂಘಟನೆ ಬೆಳೆದು ಬಂದ ಬಗ್ಗೆ ಹಾಗೂ ಹೋರಾಟದ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ಪಿಯುಸಿಎಲ್ ಜಿಲ್ಲಾಧ್ಯಕ್ಷ ಎಂ.ಕಬೀರ್, ಕರಾವಳಿ ಅಲೆ ಪತ್ರಿಕೆಯ ಸಂಪಾದಕ ಬಿ.ವಿ.ಸೀತಾರಾಂ ಮೊದಲಾದವರು ಉಪಸ್ಥಿತರಿದ್ದರು.







