ಸಮಾಜ ಸೇವೆ ನಿರಂತರ: ಪ್ರಮೋದ್ ಮಧ್ವರಾಜ್

ಉಡುಪಿ, ಅ.17: ಶಾಸಕನಾಗಿ, ಸಚಿವನಾಗಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನತೆ ನನಗೆ ತೋರಿದ ಪ್ರೀತಿ, ವಿಶ್ವಾಸ ಅಪರಿಮಿತ. ಇದನ್ನು ನಾನೆಂದೂ ಮರೆಯಲಾರೆ. ಜಾತಿ, ಮತ, ಧರ್ಮದ ಬೇಧವಿಲ್ಲದೇ ಜನರ ಹಾಗೂ ಸಮಾಜ ಸೇವೆ ನಿರಂತರವಾಗಿ ಮಾಡುತ್ತೇನೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಪ್ರಮೋದ್ ಮದ್ವರಾಜ್ ಅವರ 49ನೇ ಜನ್ಮದಿನೋತ್ಸವದ ಅಂಗವಾಗಿ ಉಡುಪಿಯ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ ಇಂದು ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಾನು ಹುಟ್ಟುಹಬ್ಬ ಆಚರಣೆಯನ್ನು ಸದಾ ವಿರೋಧಿಸುತ್ತಾ ಬಂದವನು. ಆದರೆ ಸಾರ್ವಜನಿಕರಿಗಾಗಿ ಇಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕಾಗಿ ಸಮಾರಂಭವನ್ನು ಒಪ್ಪಿಕೊಂಡಿದ್ದೇನೆ ಎಂದರು.
ಪಕ್ಷದ ಕಾರ್ಯಕರ್ತರ ಋಣ, ಕ್ಷೇತ್ರದ ಜನತೆ ನನಗೆ ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದಕ್ಕಾಗಿ ನನ್ನ ಕೊನೆಯ ಕ್ಷಣದವರೆಗೂ ಯಾವುದೇ ತಾರತಮ್ಯ ತೋರದೇ ಸಮಾಜ ಸೇವೆ ಮಾಡುತ್ತೇನೆ ಎಂದರು.
ಶುಭಾಶಂಸನೆ ಮಾಡಿದ ಕಾರ್ಕಳ ಹೊಸ್ಮಾರು ಬೊಲ್ಯೊಟ್ಟು ಮಠದ ಶ್ರೀವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಪ್ರಮೋದ್ ಅವರ ಸರಳತೆ ಎಲ್ಲರಿಗೂ ಆದರ್ಶಪ್ರಾಯ. ಸಚಿವರಾಗಿ, ಶಾಸಕರಾಗಿಯೂ, ಶ್ರೀಮಂತಿಕೆ ಹಾಗೂ ಅಧಿಕಾರವಿದ್ದರೂ ಅವರ ಸರಳತೆ ಮುಂದುವರಿದಿದೆ ಎಂದರು.
ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಕುಂತಳನಗರ ಸಂತ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ವಂ.ಡೆನ್ನಿಸ್ ಡೇಸಾ ಹಾಗೂ ಮಂಗಳೂರು ಚೊಕ್ಕಬೆಟ್ಟು ಎಂ.ಜೆ.ಮಸೀದಿಯ ಇಮಾಮ್ ವೌಲಾನ ಯು.ಕೆ.ಅಬ್ದುಲ್ ಅಝೀಝ್ ದರೀಮಿ ಅವರು ಶುಭ ಹಾರೈಸಿದರು.
ಕೆಎಂಸಿ ಮಣಿಪಾಲದ ಯುರೋಲಜಿ ವಿಭಾಗದ ಮುಖ್ಯಸ್ಥ ಡಾ.ಪದ್ಮರಾಜ್ ಹೆಗ್ಡೆ ಹಾಗೂ ಉದ್ಯಮಿ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಮೋದ್ ಅಭಿಮಾನಿ ಬಳಗದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ನಿತ್ಯಾನಂದ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಉಡುಪಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ವಂದಿಸಿದರು. ಪ್ರಸಿದ್ಧ ಭಾಗವತರಾದ ಸುಬ್ರಮಣ್ಯ ಧಾರೇಶ್ವರರು ಯಕ್ಷಗಾನ ಶೈಲಿಯಲ್ಲಿ ಪ್ರಮೋದ್‌ರನ್ನು ಪರಿಚಯಿಸಿದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು







