ಆಟೊಗೆ ಬಸ್ ಢಿಕ್ಕಿ: ಚಾಲಕನಿಗೆ ಗಂಭೀರ ಗಾಯ

ಮಂಗಳೂರು, ಅ. 17: ಖಾಸಗಿ ಬಸ್ಸೊಂದು ಆಟೊರಿಕ್ಷಾಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಆಟೊ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರವಿವಾರ ರಾತ್ರಿ ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಗಾಯಾಳು ಆಟೊ ಚಾಲಕನನ್ನು ಫ್ರಾನ್ಸಿಸ್ ಎಂದು ಗುರುತಿಸಲಾಗಿದೆ.
ಕಾರ್ಕಳದಿಂದ ಪಡುಬಿದ್ರೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಸುರತ್ಕಲ್ ಫ್ಲೈಓವರ್ ರಸ್ತೆಯಲ್ಲಿ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡು ರಿಕ್ಷಾ ಮಗುಚಿ ಬಿದ್ದಿದೆ. ಪರಿಣಾಮವಾಗಿ ರಿಕ್ಷಾ ಚಾಲಕ ಫ್ರಾನ್ಸಿಸ್‌ರ ತಲೆ ಮತ್ತು ಕೈಗೆ ಗಾಯಗಳಾಗಿದ್ದು ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಸಂಚಾರಿ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





