ವಿದ್ಯಾರ್ಥಿಗಳು ನಾಡಿನ ಅಭಿವೃದ್ಧಿಗೆ ನಾಂದಿ ಹಾಡಬೇಕು: ಷಡಕ್ಷರಿ
ಕರ್ನಾಟಕ ದರ್ಶನಕ್ಕೆ ಚಾಲನೆ

ಚಿಕ್ಕಮಗಳೂರು, ಅ.17: ‘ದೇಶ ಸುತ್ತು ಕೋಶ ಓದು’ ಎಂಬಂತೆ ಕರ್ನಾಟಕ ಸರಕಾರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪ್ರವಾಸ ಮಾಡಿ ಇತಿಹಾಸವನ್ನು ತಿಳಿದುಕೊಳ್ಳಲು ಅವಕಾಶ ನೀಡಿದೆ. ಮಕ್ಕಳು ಕಿರಿಯ ವಯಸ್ಸಿನಲ್ಲಿ ಇತಿಹಾಸ ಅವಲೋಕನ ಮಾಡುವುದರೊಂದಿಗೆ ನಾಡಿನ ಮುಂದಿನ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ಜಿಲ್ಲಾ ಸ್ಕೌಟ್ಸ್ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಹೇಳಿದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ 5 ದಿನಗಳ ಕರ್ನಾಟಕ ದರ್ಶನ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು ಸರಕಾರ ಮಕ್ಕಳಿಗೆ ಉಚಿತ ಪ್ರವಾಸ ಮಾಡುವ ಅವಕಾಶ ನೀಡಿರುವುದು ಶ್ಲಾಘನೀಯ. ಇದೊಂದು ಶೈಕ್ಷಣಿಕ ಪ್ರವಾಸವಾಗಿದ್ದು ಇದು ಶಾಲೆಯ ಹೊರಗಿನ ಕಲಿಕೆ ಎಂದು ಹೇಳಿದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಎನ್.ಮಹೇಶ್ ಮಾತನಾಡಿ, ಸರಕಾರ ನೀಡಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಇತರೆ ವಿದ್ಯಾರ್ಥಿಗಳಿಗೂ ನಮ್ಮ ನಾಡಿನ ಇತಿಹಾಸವನ್ನು ಪಸರಿಸುವ ಕೆಲಸವಾಗಬೇಕು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯದರ್ಶಿ ಶಶಿಧರ್ ರಾವ್, ಖಜಾಂಚಿ ರಮೇಶ್, ಜಿಲ್ಲಾ ತರಬೇತಿ ಆಯುಕ್ತೆ ಸಂಧ್ಯಾರಾಣಿ, ಹಿರಿಯ ಸ್ಕೌಟರ್ ನೀಲಕಂಠಾಚಾರ್, ಜಿಲ್ಲಾ ಸಂಯೋಜಕ ಕಿರಣ್ ಕುಮಾರ್, ಚೇತನ್, ಸುಪ್ರಿಯಾ ಸೇರಿದಂತೆ ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‌ಗಳು ಹಾಜರಿದ್ದರು.







