ತಲಕಾವೇರಿಯಲ್ಲಿ ತೀರ್ಥೋದ್ಭವ: ಹರಿದು ಬಂದ ಭಕ್ತ ಸಾಗರ

ಮಡಿಕೇರಿ, ಅ.17: ಜೀವನದಿ ಕಾವೇರಿಯ ಉಗಮ ಸ್ಥಾನ ಬ್ರಹ್ಮಗಿರಿಯ ತಪ್ಪಲಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವವಾಯಿತು.
ನಿಗದಿತ ಅವಧಿಗೆ ಒಂದು ನಿಮಿಷ ಮುಂಚಿತವಾಗಿ ಸೋಮವಾರ ಬೆಳಗ್ಗೆ ತುಲಾ ಲಗ್ನ ಶುಭ ಗಳಿಗೆಯಲ್ಲಿ 6 ಗಂಟೆ 28 ನಿಮಿಷಕ್ಕೆ ತೀರ್ಥರೂಪಿಣಿಯಾಗಿ ಮಾತೆ ಕಾವೇರಿ ಕಾಣಿಸಿಕೊಂಡ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ವಿಶೇಷ ಅಲಂಕಾರ:
ಕಾವೇರಿ ಮಾತೆಗೆ ಅರಸರ ಆಡಳಿತಾವಧಿಯಲ್ಲಿ ನೀಡಲಾಗಿದ್ದ ಅತ್ಯಮೂಲ್ಯ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಪೀಠ, ಚಿನ್ನದ ಮೂರು ಅಂತಸ್ತಿನ ಕೊಡೆ, ಎರಡು ಚಿನ್ನದ ಪತಾಕೆ, ಚಿನ್ನದ ಸೂರ್ಯ ಮತ್ತು ಚಂದ್ರಪಾನ ಎನ್ನುವ ಅತ್ಯಾಕರ್ಷಕ ಆಭರಣಗಳು ಮತ್ತು ಹೂಗಳಿಂದ ಬ್ರಹ್ಮ ಕುಂಡಿಕೆಯನ್ನು ಅಲಂಕರಿಸಲಾಗಿತ್ತು. ತೀರ್ಥೋದ್ಭವದ ಬಳಿಕ ಬೆಳ್ಳಿಯ ತಂಬಿಗೆಯಲ್ಲಿ ತೀರ್ಥವನ್ನು ಕುಂಡಿಕೆಯಿಂದ ಪ್ರಥಮವಾಗಿ ಸಂಗ್ರಹಿಸಿ ಭಾಗಮಂಡಲದ ಶ್ರೀ ಭಗಂಡೇಶ್ವರನಿಗೆ ಅಭಿಷೇಕ ಮಾಡಲು ಕೊಂಡೊಯ್ದರು. ಮಂಡ್ಯದ ಮಾಜಿ ಸಂಸದೆ, ಚಲನಚಿತ್ರ ನಟಿ ರಮ್ಯಾ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಡಿಕೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಮಂಡ್ಯ ಜಿಲ್ಲೆ ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿ ಗೌಡ, ಶ್ರೀಕಂಠೇಗೌಡ, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಕಾಂಗ್ರೆಸ್ ಪ್ರಮುಖರಾದ ಬ್ರಿಜೇಶ್ ಕಾಳಪ್ಪ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಜಿಪಂ ಸದಸ್ಯರಾದ ಕೆ.ಪಿ. ಚಂದ್ರಕಲಾ, ಕವಿತಾ ಪ್ರಭಾಕರ್ ಸೇರಿದಂತೆ ಹಲವು ಗಣ್ಯರು ಭಕ್ತಿಯ ಕ್ಷಣಕ್ಕೆ ಸಾಕ್ಷಿಯಾದರು.
ಈ ಬಾರಿ ಕೇರಳದ ಭಕ್ತರೇ ಹೆಚ್ಚು, ತಮಿಳುನಾಡು ಭಕ್ತರು ವಿರಳ ತಲ ಕಾವೇರಿಯ ತುಲಾ ಸಂಕ್ರಮಣ ಜಾತ್ರೆಯಲ್ಲಿ ಕಳೆದ ಇದೇ ಪ್ರಥಮ ಬಾರಿಗೆ ತಮಿಳುನಾಡಿನ ಭಕ್ತರು ಅತ್ಯಂತ ವಿರಳ ಸಂಖ್ಯೆಯಲ್ಲಿದ್ದರು. ಆದರೆ ನೆರೆಯ ಕೇರಳದ ಭಕ್ತ ಸಮೂಹ ಅಧಿಕವಾಗಿದ್ದದ್ದು ವಿಶೇಷವಾಗಿತ್ತು.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರಿನ ವಿವಾದ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಭಕ್ತರು ತೀರ್ಥೋದ್ಭವವನ್ನು ವೀಕ್ಷಿಸಲು ಆಗಮಿಸಿಲ್ಲ. ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನ ಪೂಂಪ್ ಹಾರ್‌ನಲ್ಲಿ ಸಮುದ್ರ ಸೇರುವ ಕಾವೇರಿ, ತನ್ನ ಈ ಸುದೀರ್ಘ ಹಾದಿಯಲ್ಲಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ಜನತೆಯ ಅನ್ನದಾತೆಯಾಗಿ ಪರಿಗಣಿಸಲ್ಪಟ್ಟಿದ್ದಾಳೆ.
ಇಂತಹ ಭಾವನಾತ್ಮಕ ಸಂಬಂಧಗಳ ಹಿನ್ನೆಲೆಯಲ್ಲಿ ವರ್ಷಂಪ್ರತಿ ತಲಕಾವೇರಿಯ ತೀರ್ಥೋದ್ಭವದ ಕ್ಷಣಗಳನ್ನು ಮನದುಂಬಿಕೊಳ್ಳುವ ಸಲುವಾಗಿ ತಮಿಳುನಾಡಿನ ಭಕ್ತರು ನೂರಾರು ವಾಹನಗಳಲ್ಲಿ ಆಗಮಿಸುತ್ತಿದ್ದರು. ಆದರೆ ಈ ಬಾರಿ ತಮಿಳುನಾಡಿನ ಭಕ್ತರೇ ಇರಲಿಲ್ಲ.
ಜಿಲ್ಲಾಡಳಿತದಿಂದ ಉತ್ತಮ ಭದ್ರತೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಉಸ್ತುವಾರಿಯಲ್ಲಿ ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ತೀರ್ಥೋದ್ಭವದ ಹಂತದಲ್ಲಿ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಪೊಲೀಸರು ಅಗತ್ಯ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರು. ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ಹಾದಿಯಲ್ಲಿ ಪೊಲೀಸ್ ಬಂದೋಬಸ್ತ್, ಏಕಮುಖ ಮಾರ್ಗದ ವ್ಯವಸ್ಥೆ, ಭಾಗಮಂಡಲದಿಂದ ತಲಕಾವೇರಿ ರಸ್ತೆಯುದ್ದಕ್ಕು ಅಂದಾಜು 8 ಕಿ.ಮೀ. ವರೆಗೆ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗಿತ್ತು.







