ಮುಂದುವರಿದ ರಾಯಣ್ಣ ಬ್ರಿಗೇಡ್
ಯಡಿಯೂರಪ್ಪಗೆ ಟಾಂಗ್ ನೀಡಿದ ಈಶ್ವರಪ್ಪ!
.jpg)
<ಬಿ.ರೇಣುಕೇಶ್
ಶಿವಮೊಗ್ಗ, ಅ. 17: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ಕೆ.ಎಸ್. ಈಶ್ವರಪ್ಪರವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಳಿಸು ತ್ತಾರೆಂಬ ಮಾತು ಬಿಜೆಪಿ ಪಾಳೆಯದಲ್ಲಿ ಕೇಳಿ ಬಂದಿತ್ತು. ಆದರೆ, ಕೆ.ಎಸ್. ಈಶ್ವರಪ್ಪನವರು ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.
‘ಬ್ರಿಗೇಡ್ ಕಾರ್ಯಚಟುವಟಿಕೆ ಎಂದಿನಂತೆ ಮುಂದುವರಿಯಲಿದೆ. ರಾಜಕೀಯೇತರ ಸಂಘಟನೆಯಾಗಿ ಪರಿವರ್ತ ನೆಯಾಗಲಿದೆ. ಮಠಾಧೀ ಶರು ನೇತೃತ್ವವಹಿಸಲಿದ್ದಾರೆ. ಅವರು ಬ್ರಿಗೇಡ್ ಸಭೆಗೆ ಆಹ್ವಾನಿಸಿದರೆ ಹೊೀಗುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿ.ಎಸ್. ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ತಲೆದೋ ರಿರುವ ‘ಬ್ರಿಗೇಡ್’ ಕಲಹಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣ ಗಳು ಕಾಣುತ್ತಿಲ್ಲ.
ಸೋಮವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ‘ಬಿಜೆಪಿ ಅಧಿಕಾರಕ್ಕೆ ತರಲು ಹಾಗೂ ಬಿಎಸ್‌ವೈಯವರನ್ನು ಮುಖ್ಯಮಂತ್ರಿಯನ್ನಾಗಿಸಲು ಬ್ರಿಗೇಡ್ ಸಂಘಟಿಸಲಾಗಿತ್ತು. ಆದರೆ, ಬಿಎಸ್‌ವೈಯವರು ಬ್ರಿಗೇಡ್ ಬಗ್ಗೆ ಆಸಕ್ತಿ ತೋರಲಿಲ್ಲ. ಸಭೆಗೆ ಯಾರೂ ಹೋಗಬಾರದು ಎಂದು ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಬ್ರಿಗೇಡ್‌ನ ಉದ್ದೇಶ ಬದಲಾಯಿಸಲಾಗಿದೆ. ಬಿಜೆಪಿಗೂ ಬ್ರಿಗೇಡ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ರಾಜಕಿಯೇತರ ಸಂಘಟನೆಯಾಗಿ ಪರಿವರ್ತಿಸಲಾಗಿದೆ. ಹಿಂದುಳಿದ, ದಲಿತ ವರ್ಗದ ಮಠಾಧೀಶರು, ಮುಖಂಡರು ಸಂಘಟನೆಯನ್ನು ಮುಂದುವರಿಸಲಿದ್ದಾರೆ. ತಾವು ಸಂಘಟನೆಯಿಂದ ಹೊರಬಂದಿದ್ದೇನೆ. ಮಠಾಧೀಶರು-ಮುಖಂಡರು ಸಭೆಗೆ ಆಹ್ವಾನ ನೀಡಿದರೆ ಹೋಗುತ್ತ್ತೇನೆ. ಹಾಗೆಯೇ ಬಿಎಸ್‌ವೈಗೆ ಆಹ್ವಾನಿಸಿದರೆ ಅವರು ಕೂಡ ತೆರಳುತ್ತಾರೆ. ಯಾವ ಪಕ್ಷದ ಮುಖಂಡರೂ ಬೇಕಾದರೂ ಹೋಗಬಹುದು ಎಂದು ಅಡ್ಡ ಗೋಡೆಯಲ್ಲಿ ದೀಪವಿಟ್ಟಂತೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಮಾತುಕತೆ: ಬಿಎಸ್‌ವೈರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ್ದೇನೆ. ಬ್ರಿಗೇಡ್ ಬಗ್ಗೆಯೂ ಚರ್ಚೆ ಮಾಡಲಾಗಿದೆ. ತಮ್ಮ ನಡುವಿನಲ್ಲಿದ್ದ ಭಿನ್ನಾಭಿಪ್ರಾಯಗಳು ಪರಿಹಾರವಾಗಿವೆ. ಹಾಗೆಯೇ ಕಾರ್ಯಕರ್ತರ ವಲಯದಲ್ಲಿದ್ದ ಗೊಂದಲಕ್ಕೂ ತೆರೆ ಬಿದ್ದಿದೆ. ಇನ್ನು ಮುಂದೆ ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳುವ ಮೂಲಕ ಬ್ರಿಗೇಡ್ ಕಲಹಕ್ಕೆ ಈಶ್ವರಪ್ಪ ತೇಪೆ ಹಚ್ಚಿದ್ದಾರೆ. ‘ಬ್ರಿಗೇಡ್’ ಬಗ್ಗೆ ಬಿಎಸ್‌ವೈರಲ್ಲಿ ಗೊಂದಲವಿರುವುದೇಕೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಈಶ್ವರಪ್ಪ, ‘ಈ ಬಗ್ಗೆ ಅವರನ್ನೇ ಕೇಳಿ ಎಂದು ಉತ್ತರ ನೀಡಿದರು. ಮುಂದೇನು?: ‘ಬ್ರಿಗೇಡ್’ ಕಾರ್ಯಚಟುವಟಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂಬ ಬಿಎಸ್‌ವೈ ಬೇಡಿಕೆಗೆ ಮಣಿಯದಿರಲು ನಿರಾಕರಿಸಿರುವ ಈಶ್ವರಪ್ಪ, ಹಿಂದುಳಿದ-ದಲಿತ ವರ್ಗಗಳ ಮಠಾಧೀಶರು ಹಾಗೂ ಮುಖಂಡರ ಹೆಗಲಿಗೆ ಹಸ್ತಾಂತರಿಸಿ ಈ ಮೂಲಕ ಸವಾಲಿಗೆ ಪ್ರತಿ ಸವಾಲು ಹಾಕಿದ್ದಾರೆ. ಇದರಿಂದ ಕಮಲ ಪಾಳೆಯದಲ್ಲಿ ಪ್ರಸ್ತುತ ಭುಗಿಲೆದ್ದಿರುವ ‘ಬ್ರಿಗೇಡ್’ ಗಲಾಟೆ ಹೊಸ ತಿರುವು ಪಡೆದುಕೊಂಡಂತಾಗಿದೆ.
ರವಿವಾರ ಶಿವಮೊಗ್ಗ ನಗರದಲ್ಲಿ ಬಿಎಸ್‌ವೈ ಹಾಗೂ ಕೆಎಸ್‌ಇ ನಡುವೆ ನಡೆದ ಮಾತು ಕತೆಯ ವೇಳೆಯೂ ಈಶ್ವರಪ್ಪ ಇದೇ ಅಭಿಪ್ರಾಯ ವ್ಯಕ್ತಪಡಿ ಸಿದ್ದಾರೆನ್ನಲಾಗಿದೆ. ‘ಬ್ರಿಗೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ. ಆ ಸಂಘಟನೆಯಿಂದ ತಾವು ಹೊರಬಂ ದಿದ್ದೇನೆ. ಕೆಲ ಮಠಾಧೀಶರು ಸಂಘಟನೆ ಮುಂದುವರಿಸುತ್ತಾರೆ. ಅವರಿಗೆ ಸಂಘಟನೆಯ ಚಟುವಟಿಕೆ ನಿಲ್ಲಿಸಿ ಎಂು ಹೇಳುವ ಅಧಿಕಾರ ತಮಗಿಲ್ಲ. ಅವರು ಭೆಗೆ ಆಹ್ವಾನಿಸಿದರೆ ಹೋಗುತ್ತೇನೆ. ಅವರು ನಿಮ್ಮನ್ನು ಕರೆದರೆ ನೀವೂ ಹೋಗಿ’ ಎಂದು ಖಡಕ್ ಆಗೇ ಮಾತನಾಡಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಸಂಘಪರಿವಾರದ ಮುಖಂಡರೂ ಈಶ್ವರಪ್ಪನವರ ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಇನ್ನು ಮುಂದೆ ಈ ವಿಚಾರ ಮುಂದಿಟ್ಟುಕೊಂಡು ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಬೇಡ. ಒಟ್ಟಾಗಿ ಕೆಲಸ ಮಾಡಿ ಎಂದು ಇಬ್ಬರು ಮುಖಂಡರಿಗೂ ತಿಳಿ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ ಬಿಎಸ್‌ವೈ ಈಶ್ವರಪ್ಪನವರ ನಿಲುವಿಗೆ ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ. ಸದ್ಯಕ್ಕೆ ಏನನ್ನೂ ಹೇಳಲಾರೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ನಾವಿಬ್ಬರು ಇಂಡಿಯಾ-ಪಾಕಿಸ್ತಾನ ಅಲ್ಲ...!
ನಾ
ನು ಮತ್ತು ಬಿ.ಎಸ್. ಯಡಿಯೂರಪ್ಪ ಇಂಡಿಯಾ - ಪಾಕಿಸ್ತಾನ ಅಲ್ಲ. ನಾವಿಬ್ಬರೂ ಜೊತೆಯಾಗಿಯೇ ಇದ್ದೇವೆ. ಒಟ್ಟಿಗೆ ಕೆಲಸ ಮಾಡಲಿದ್ದೇವೆ. ಭಿನ್ನಾಭಿಪ್ರಾಯಗಳಿದ್ದರೆ ಕುಳಿತು ಪರಿಹರಿಸಿಕೊಳ್ಳುತ್ತೇವೆ’ ಎಂದು ಕೆ.ಎಸ್. ಈಶ್ವರಪ್ಪತಿಳಿಸಿದ್ದಾರೆ. ಬ್ರಿಗೇಡ್ ಬಗ್ಗೆ ಪ್ರಶ್ನೆ ಕೇಳಬೇಡಿ: ಪತ್ರಕರ್ತರ ವಿರುದ್ಧ ಬಿಎಸ್‌ವೈಗರಂ!
ಶಿವಮೊಗ್ಗ: ‘ಇನ್ಮುಂದೆ ಬ್ರಿಗೇಡ್ ಬಗ್ಗೆ ಯಾವುದೇ ಪ್ರಶ್ನೆ ಗಳನ್ನು ಕೇಳಬೇಡಿ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಸುದ್ದಿಗಾರರಿಗೆ ತಾಕೀತು ಮಾಡಿದ್ದಾರೆ.
ಸೊ
ೀಮವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರು ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಗರಂ ಆದ ಯಡಿಯೂರಪ್ಪ, ‘ಈ ಹಿಂದಿನಿಂದಲೂ ನಿಮಗೆ (ಪತ್ರಕರ್ತರು) ಈ ಬಗ್ಗೆ ಕೇಳಬೇಡಿ ಎಂದು ಹೇಳುತ್ತಿದ್ದೇನೆ. ಆದರೂ ಕೇಳುತ್ತಿದ್ದೀರಿ’ ಎಂದು ಸಿಟ್ಟಾಗಿ ಉತ್ತರ ನೀಡಿದರು.
ಆದಾಗ್ಯೂ ಪತ್ರಕರ್ತರು ಪಟ್ಟು ಬಿಡದೆ ಪ್ರಶ್ನಿಸಿದಾಗ, ‘ಬ್ರಿಗೇಡ್ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ. ಆ ಬಗ್ಗೆ ಯಾವುದೇ ಪ್ರತಿಕ್ರಿಯೆಯೂ ನೀಡುವುದಿಲ್ಲ. ಏನೇ ಭಿನ್ನಾಭಿಪ್ರಾಯ, ಗೊಂದಲಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚಿಸುತ್ತೇವೆ. ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ’ ಎಂದು ಅಸಮಾಧಾನದಿಂದಲೇ ಉತ್ತರಿಸಿದರು. ‘ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಯಾವಾಗ ಚರ್ಚೆ ನಡೆಯಲಿದೆ’ ಎಂಬ ಪತ್ರಕರ್ತರ ಮರು ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಯಡಿಯೂರಪ್ಪನವರು ಕೋಪದಿಂದಲೇ ಅರ್ಧಕ್ಕೆ ಮಾತು ಮೊಟಕುಗೊಳಿಸಿ ಮುನ್ನಡೆದರು.
ಮೂಡದ ದೋಸ್ತಿ, ಮುಂದುವರಿದ ದುಷ್ಮನಿ?
ಶಿವಮೊಗ್ಗ:
ಗಳಸ್ಯಕಂಠಸ್ಯದ ಮೂಲಕ ಬಿಜೆಪಿಯ ’ಹಕ್ಕಬುಕ್ಕ’ರೆಂದೇ ಖ್ಯಾತರಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪನವರ ನಡುವಿನ ಸಂಬಂಧ ಪ್ರಸ್ತುತ ಹಳಸಿದೆ. ದೋಸ್ತಿಗಳೀಗ ದುಷ್ಮನಿಗಳಾಗಿ ಪರಿವರ್ತಿತವಾಗಿದ್ದಾರೆ. ಒಬ್ಬರು ಮತ್ತೊಬ್ಬರ ಮುಖ ನೋಡದ ಮಟ್ಟಕ್ಕೆ ಅವರಿಬ್ಬರಲ್ಲಿ ವೈಮನಸ್ಸು ಮನೆ ಮಾಡಿದೆ. ಇದಕ್ಕೆ ಸೋಮ ವಾರ ಶಿವಮೊಗ್ಗ ನಗರದಲ್ಲಿ ನಡೆದ ಕಾರ್ಯಕ್ರಮ ವೊಂದು ಸಾಕ್ಷಿಯಾಯಿತು. ಕಳೆದ ಕೆಲ ತಿಂಗಳುಗಳಿಂದ ಯಡಿಯೂರಪ್ಪ ಮತ್ತು ಈಶ್ವರಪ್ಪನವರು ಸಾರ್ವಜನಿಕವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಯಾವುದೇ ಕಾರ್ಯಕ್ರಮಗಳಿಗೆ ಒಬ್ಬರು ಹಾಜರಾದರೆ ಮತ್ತೊಬ್ಬರು ಗೈರು ಹಾಜರಾಗುತ್ತಿದ್ದರು.
ಆದರೆ, ನಗರದ ತಿಪ್ಪಾಜೋಯಿಸ ಕಾಲನಿಯಲ್ಲಿ ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್‌ನ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಇಬ್ಬರು ನಾಯಕರೂ ಭಾಗವಹಿಸಿದ್ದರು. ಆದರೆ, ತಮ್ಮ ನಡುವೆ ಅಂತರ ಕಾಯ್ದುಕೊಂಡಿದ್ದ ಇಬ್ಬರೂ, ಒಬ್ಬರು ಮತ್ತೊಬ್ಬರ ಮುಖ ನೋಡಲಿಲ್ಲ. ಸೌಜನ್ಯಕ್ಕೂ ಮಾತನಾಡಲಿಲ್ಲ. ಸಭೆಯ ಬಳಿಕ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂದಿರ ದಲ್ಲಿ ಈ ಇಬ್ಬರು ಮುಖಂಡರು ಊಟ ಮಾಡಿದರು. ಒಂದು ಸಾಲಿನಲ್ಲಿ ಯಡಿಯೂರಪ್ಪ ಕುಳಿತ್ತಿದ್ದರೆ, ಮತ್ತೊಂದು ಸಾಲಿನಲ್ಲಿ ಈಶ್ವರಪ್ಪ ಕುಳಿತುಕೊಂಡಿದ್ದರು. ಇದು ಸಭೆಯಲ್ಲಿ ಭಾಗ ವಹಿಸಿದವರಲ್ಲಿ ನಾನಾ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿತು.







