ಉ.ಕ.ದಾದ್ಯಂತ ತಂಬಾಕು ನಿಯಂತ್ರಣಕ್ಕೆ ಕ್ರಮ: ಕೆ. ಜಿ. ದೇವರಾಜ್
ತಂಬಾಕು ಉತ್ಪನ್ನಗಳ ನಿಯಂತ್ರಣ ಕಾರ್ಯಾಗಾರ
ಕಾರವಾರ, ಅ.17: ಇಂದಿನ ದಿನಗಳಲ್ಲಿ ಯುವಜನತೆ ತಂಬಾಕು ಚಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿದ್ದಾರೆ. ನಿರ್ಬಂಧಿತ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಪರ ಪೊಲೀಸ್ ಅಧೀಕ್ಷಕ ಕೆ. ಜಿ. ದೇವರಾಜ್ ಹೇಳಿದರು.
ಜಿಲ್ಲೆಯನ್ನು ತಂಬಾಕು ಉತ್ಪನ್ನಗಳ ಬಳಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಸರಕಾರದ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಪೊಲೀಸ್ ಅಧಿಕಾರಿಗಳಿಗೆ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ಕಾಲೇಜುಗಳ ಮುಂದೆ ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ ಹೆಚ್ಚುತ್ತಿದ್ದು ಇವುಗಳ ಮೇಲೆ ಕಡಿವಾಣ ಹಾಕುವುದು ಅತ್ಯವಶ್ಯಕವಾಗಿದೆ ಅವರು ಹೇಳಿದರು. ಕಾರ್ಯಾಗಾರದಲ್ಲಿ ಡಿಸಿಆರ್‌ಬಿ ಡಿವೈಎಸ್ಪಿ ಜಿ.ಟಿ. ನಾಯಕ ಮಾತನಾಡಿ, ಶಾಲಾ ಕಾಲೇಜುಗಳ ಆವರಣಗಳ ಸುತ್ತ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕೈಗೊಳ್ಳುವ ಬಗ್ಗೆ ಕೊಟ್ಪಾಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ. ಚಂದ್ರಶೇಖರ ಮಾತನಾಡಿ, ತಂಬಾಕು ಕೋಟ್ಯಂತರ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಮಾರಕ ತಂಬಾಕು ಸೇವನೆಯಿಂದಾಗಿ ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಭಾರತ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇತ್ತೀಚಿನ ಸಂಶೋಧನೆಗಳ ಪ್ರಕಾರ ದೇಶದಲ್ಲಿ ಪ್ರತಿ ಎಂಟು ಸೆಕೆಂಡಿಗೆ ಒಬ್ಬರು ತಂಬಾಕು ಸೇವನೆ ಮಾಡುವವರು ಕೊನೆ ಉಸಿರೆಳೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಶೇ. 40 ರಷ್ಟು ಪುರುಷರು ಮತ್ತು ಶೇ.16 ರಷ್ಟು ಮಹಿಳೆಯರು ತಂಬಾಕು ಉತ್ಪನ್ನಗಳ ದಾಸರಾಗಿದ್ದಾರೆ. ಇದರ ಪರಿಣಾಮ ಕ್ಯಾನ್ಸರ್, ಹೃದ್ರೋಗ, ಶ್ವಾಸಕೋಶ ತೊಂದರೆ ಸೇರಿದಂತೆ ಮತ್ತಿತರ ಮಾರಣಾಂತಿಕ ರೋಗಗಳಿಗೆ ಲಕ್ಷಾಂತರ ಜನ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕಾರಾವಾರ ವ್ಯಾಪ್ತಿಗೆ ಒಳಪಡುವ 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.







