ಕೋಟ್ಲಾ ಸ್ಟೇಡಿಯಂನಲ್ಲಿ ಭಾರತ ದಾಖಲಿಸಿದ 5 ಸ್ಮರಣೀಯ ಗೆಲುವು

ಹೊಸದಿಲ್ಲಿ, ಅ.17: ಟೀಮ್ ಇಂಡಿಯಾ ರವಿವಾರ ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಅಕ್ಟೋಬರ್ 20 ರಂದು ದಿಲ್ಲಿಯ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಎರಡನೆ ಏಕದಿನ ಪಂದ್ಯ ಆಡಲು ಸಜ್ಜಾಗುತ್ತಿದೆ.
ಕೋಟ್ಲಾ ಸ್ಟೇಡಿಯಂನಲ್ಲಿ ಭಾರತ ಒಟ್ಟು 12 ಏಕದಿನ ಪಂದ್ಯಗಳನ್ನು ಜಯಿಸಿದೆ. ಐದು ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಫಲಿತಾಂಶರಹಿತ ಹಾಗೂ ಇನ್ನೊಂದು ಪಂದ್ಯ ರದ್ದಾಗಿದೆ.
ಭಾರತ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ದಾಖಲಿಸಿದ ಐದು ಸ್ಮರಣೀಯ ಗೆಲುವಿನತ್ತ ಒಂದು ನೋಟ...
1987ರಲ್ಲಿ ಆಸ್ಟ್ರೇಲಿಯ ವಿರುದ್ಧ 56 ರನ್ ಜಯ
ರಿಲಯನ್ಸ್ ವರ್ಲ್ಡ್ ಕಪ್‌ನ 15ನೆ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಆಸ್ಟ್ರೇಲಿಯವನ್ನು ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಸದೆ ಬಡಿಯಿತು. ಸುನೀಲ್ ಗವಾಸ್ಕರ್(61), ನವಜೋತ್ ಸಿಧು(51), ದಿಲಿಪ್ ವೆಂಗ್ ಸರ್ಕಾರ್(83) ಹಾಗೂ ಮುಹಮ್ಮದ್ ಅಝರುದ್ದೀನ್(ಔಟಾಗದೆ 54 ರನ್) ನೆರವಿನಿಂದ ಭಾರತ 6 ವಿಕೆಟ್‌ಗೆ 289 ರನ್ ಕಲೆಹಾಕಿತ್ತು. ಕಠಿಣ ಗುರಿ ಪಡೆದಿದ್ದ ಆಸ್ಟ್ರೇಲಿಯಕ್ಕೆ ಜೆಫ್ ಮಾರ್ಷ್(33) ಹಾಗೂ ಡೇವಿಡ್ ಬೂನ್(62) ಮೊದಲ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದರು. ಆದರೆ, ಭಾರತದ ಸ್ಪಿನ್ನರ್‌ಗಳ ದಾಳಿಗೆ ಸಿಲುಕಿದ ಆಸೀಸ್ 49 ಓವರ್‌ಗಳಲ್ಲಿ 233 ರನ್‌ಗೆ ಆಲೌಟಾಗಿತ್ತು. ಅಚ್ಚರಿಯೆಂಬಂತೆ ಬೌಲಿಂಗ್‌ನಲ್ಲೂ ಮಿಂಚಿದ ಅಝರ್ 3.5 ಓವರ್‌ಗಳಲ್ಲಿ 18 ರನ್‌ಗೆ 3 ವಿಕೆಟ್ ಉಡಾಯಿಸಿದ್ದರು. ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್ 10 ಓವರ್‌ಗಳಲ್ಲಿ 34 ರನ್‌ಗೆ 3 ವಿಕೆಟ್ ಕಬಳಿಸಿದ್ದರು.
1994ರಲ್ಲಿ ನ್ಯೂಝಿಲೆಂಡ್ ವಿರುದ್ಧ 107 ರನ್ ಗೆಲುವು
1994ರ ನವೆಂಬರ್‌ನಲ್ಲಿ ನಡೆದಿದ್ದ ವಿಲ್ಸ್ ವರ್ಲ್ಡ್ ಸಿರೀಸ್‌ನ 6ನೆ ಪಂದ್ಯದಲ್ಲಿ ಮುಹಮ್ಮದ್ ಅಝರುದ್ದೀನ್ ನಾಯಕತ್ವದ ಭಾರತ ಕೇನ್ ರುಥರ್‌ಫೋರ್ಡ್ ನೇತೃತ್ವದ ನ್ಯೂಝಿಲೆಂಡ್‌ನ್ನು 107 ರನ್‌ಗಳಿಂದ ಮಣಿಸಿತ್ತು. ಅಜಯ್ ಜಡೇಜ(90), ಸಚಿನ್ ತೆಂಡುಲ್ಕರ್(62) ಹಾಗೂ ನಾಯಕ ಅಝರ್(ಅಜೇಯ 58) ಅಮೂಲ್ಯ ಕೊಡುಗೆಯಿಂದ ಭಾರತ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತ್ತು. 27 ರನ್‌ಗೆ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿದ್ದ ಕಿವೀಸ್ ಬಳಿಕ ಚೇತರಿಸಿಕೊಳ್ಳಲು ವಿಫಲವಾಗಿ 45.4 ಓವರ್‌ಗಳಲ್ಲಿ 182 ರನ್‌ಗೆ ಆಲೌಟಾಗಿತ್ತು. ತೆಂಡುಲ್ಕರ್ ಹಾಗೂ ವೆಂಕಟಪತಿ ರಾಜು ತಲಾ 2 ವಿಕೆಟ್ ಕಬಳಿಸಿದ್ದರು.
1999ರಲ್ಲಿ ನ್ಯೂಝಿಲೆಂಡ್ ವಿರುದ್ಧ 7 ವಿಕೆಟ್‌ಗಳ ಜಯ
ವೇಗದ ಬೌಲರ್ ಟಿ. ಕುಮಾರನ್(3-34) ಸಾಹಸದಿಂದ ಭಾರತ ತಂಡ ನ್ಯೂಝಿಲೆಂಡ್‌ನ್ನು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 179 ರನ್‌ಗೆ ನಿಯಂತ್ರಿಸಿತ್ತು. 100 ಎಸೆತಗಳಲ್ಲಿ 86 ರನ್ ಬಾರಿಸಿ ಉತ್ತಮ ಫಾರ್ಮ್ ಮುಂದುವರಿಸಿದ್ದ ಸೌರವ್ ಗಂಗುಲಿ 44 ಓವರ್‌ಗಳಲ್ಲಿ 7 ವಿಕೆಟ್‌ಗಳ ಗೆಲುವು ತಂದುಕೊಟ್ಟಿದ್ದರು. ಕಿವೀಸ್ ವಿರುದ್ಧ ಫೈನಲ್ ಪಂದ್ಯವನ್ನು ಜಯಿಸಿ 3-2 ರಿಂದ ಸರಣಿ ಜಯಿಸಿದ ಭಾರತದ ಪರ ಗಂಗುಲಿ ಗರಿಷ್ಠ ಸ್ಕೋರ್(301) ಗಳಿಸಿ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
2011ರಲ್ಲಿ ಇಂಗ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಜಯ
ಆತಿಥೇಯ ಭಾರತದ ವಿರುದ್ಧ 2011ರ ಅಕ್ಟೋಬರ್‌ನಲ್ಲಿ 5 ಪಂದ್ಯಗಳ ಸರಣಿಯ 2ನೆ ಪಂದ್ಯ ಆಡಿದ್ದ ಇಂಗ್ಲೆಂಡ್ ತಂಡ ವಿರಾಟ್ ಕೊಹ್ಲಿ ಹಾಗೂ ವಿನಯಕುಮಾರ್ ಅಬ್ಬರಕ್ಕೆ ತತ್ತರಿಸಿತ್ತು. ಲೋಕಲ್ ಬಾಯ್ ಕೊಹ್ಲಿ 98 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿದರೆ, ವೇಗಿ ಆರ್.ವಿನಯಕುಮಾರ್(4-30) ಇಂಗ್ಲೆಂಡ್‌ನ್ನು 48.2 ಓವರ್‌ಗಳಲ್ಲಿ 237 ರನ್‌ಗೆ ನಿಯಂತ್ರಿಸಿದರು. ಗೌತಮ್ ಗಂಭೀರ್(ಅಜೇಯ 84)ರೊಂದಿಗೆ 3ನೆ ವಿಕೆಟ್‌ಗೆ 209 ರನ್ ಸೇರಿಸಿದ್ದ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
2014ರಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ 48 ರನ್ ಜಯ
ವಿಂಡೀಸ್ ವಿರುದ್ಧ ಸರಣಿಯ ಮೊದಲ ಪಂದ್ಯವನ್ನು ಸೋತಿದ್ದ ಭಾರತ 2014ರ ಅಕ್ಟೋಬರ್ 11ರಂದು ದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ತಿರುಗೇಟು ನೀಡಿತ್ತು. ನಾಯಕ ಎಂಎಸ್ ಧೋನಿ 40 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸಿ ತಂಡ 7 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಲು ಮುಖ್ಯ ಪಾತ್ರವಹಿಸಿದ್ದರು. ವಿಂಡೀಸ್ ಪರ ಡ್ವೆಯ್ನೆ ಸ್ಮಿತ್(97) ಏಕಾಂಗಿ ಹೋರಾಟ ನೀಡಿದರೂ, ಮುಹಮ್ಮದ್ ಶಮಿ(4-36), ರವೀಂದ್ರ ಜಡೇಜ ಹಾಗೂ ಅಮಿತ್ ಮಿಶ್ರಾ(ತಲಾ 3 ವಿಕೆಟ್) ವಿಂಡೀಸ್‌ಗೆ ಸವಾಲಾದರು.







