ಪೊಲೀಸರಿಂದ ಐದು ರೈಫಲ್‌ಗಳನ್ನು ಕಿತ್ತುಕೊಂಡ ಭಯೋತ್ಪಾದಕರು
ಶ್ರೀನಗರ,ಅ.17: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಪೊಲೀಸ್ ಚೌಕಿಯೊಂದಕ್ಕೆ ಇಂದು ಬೆಳಗಿನ ಜಾವ ನುಗ್ಗಿದ ಸೇನಾ ಸಮವಸ್ತ್ರದಲ್ಲಿದ್ದ ಭಯೋತ್ಪಾದಕರು ಪೊಲೀಸರ ಬಳಿಯಿದ್ದ ಐದು ರೈಫಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅನಂತನಾಗ್ ಜಿಲ್ಲೆಯ ದೂರು ಪ್ರದೇಶದ ದಲ್ವಾಶ್ ಎಂಬಲ್ಲಿರುವ ಟಿವಿ ಗೋಪುರವನ್ನು ಕಾಯಲು ಪೊಲೀಸರನ್ನು ನಿಯೋಜಿಸಲಾಗಿದ್ದು, ನಸುಕಿನ 12.30 ರ ಸುಮಾರಿಗೆ ಕಾವಲು ಚೌಕಿಗೆ ನುಗ್ಗಿದ ಭಯೋತ್ಪಾದಕರು ಪೊಲೀಸರನ್ನು ಬೆದರಿಸಿ,ಮೂರು ಎಸ್‌ಎಲ್‌ಆರ್ ರೈಫಲ್‌ಗಳು, ಒಂದು ಕಾರ್ಬನ್ ಮತ್ತು ಒಂದು ಇನ್ಸಾಸ್ ರೈಫಲ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಪರಾರಿಯಾಗಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚಲು ದಕ್ಷಿಣ ಕಾಶ್ಮೀರದಾದ್ಯಂತ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.
ಪ್ರತ್ಯೇಕ ಘಟನೆಯೊಂದರಲ್ಲಿ ಕಳೆದ ರಾತ್ರಿ ಪುಲ್ವಾಮಾ ಜಿಲ್ಲೆಯ ಸಿರ್ನೂ ಎಂಬಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಡಾವಣೆಯ ಕಾವಲು ನಿರ್ವಹಿಸುತ್ತಿರುವ ಪೊಲೀಸ್ ಚೌಕಿಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.





