ಇಂದು ಡೆನ್ಮಾರ್ಕ್ ಓಪನ್ ಆರಂಭ: ರಿಯೋ ಬಳಿಕ ಸಿಂಧು ಪುನರಾಗಮನ

ಒಡೆನ್ಸೆ, ಅ.17: ಡೆನ್ಮಾರ್ಕ್ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಂಗಳವಾರ ಇಲ್ಲಿ ಆರಂಭವಾಗಲಿದ್ದು, ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.
ರಿಯೋ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡಿದ್ದ ಸಿಂಧು ಕಳೆದ ಒಂದೂವರೆ ತಿಂಗಳಿಂದ ದೇಶದ ವಿವಿಧೆಡೆ ನಡೆದ ಸನ್ಮಾನ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದರು. 6ನೆ ಶ್ರೇಯಾಂಕಿತೆ ಸಿಂಧು ಬುಧವಾರ ಚೀನಾದ ಹೀ ಬಿಂಗಿಜಾವೊರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ಒಲಿಂಪಿಕ್ಸ್ ನನಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿದೆ. ಇದೀಗ ನನಗೆ ಹೊಣೆಗಾರಿಕೆ ಹೆಚ್ಚಾಗಿದೆ. ನಾನು ಹೆಚ್ಚು ಒತ್ತಡಕ್ಕೆ ಒಳಗಾಗದೆ ನನ್ನ ಪಂದ್ಯವನ್ನು ಆಡುವೆ. ಬ್ಯಾಡ್ಮಿಂಟನ್ ಅಂಗಳದಲ್ಲಿ 100 ಶೇ. ಪ್ರದರ್ಶನ ನೀಡಲು ಯತ್ನಿಸುವೆ ಎಂದು ಸಿಂಧು ತಿಳಿಸಿದರು.
ಹೈದರಾಬಾದ್‌ನ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಜಯಿಸಿದ್ದಾರೆ. ಕಳೆದ ವರ್ಷ ಡೆನ್ಮಾರ್ಕ್ ಓಪನ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದರು.
ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಅಜಯ ಜಯರಾಮ್ ಥಾಯ್ಲೆಂಡ್‌ನ ಬುನ್ಸೆಕ್ ಪೊನ್ಸಾನಾರನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ಹೋರಾಟ ಆರಂಭಿಸಲಿದ್ದಾರೆ. ಜಯರಾಮ್ ರವಿವಾರ ಕೊನೆಗೊಂಡ ಡಚ್ ಓಪನ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಜಯಿಸಿದ್ದರು.
ರಿಯೋ ಒಲೀಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಕೆ.ಶ್ರೀಕಾಂತ್ ಮಂಡಿನೋವಿನಿಂದಾಗಿ ಟೂರ್ನಿಯಲ್ಲಿ ಆಡುತ್ತಿಲ್ಲ. ಸಾಯಿ ಪ್ರಣೀತ್, ಎಚ್‌ಎಸ್ ಪ್ರಣಯ್ ಹಾಗೂ ಪಿ. ಕಶ್ಯಪ್ ಸಿಂಗಲ್ಸ್ ಪಂದ್ಯ ಆಡಲಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ತನ್ನ ಮೊದಲ ಪಂದ್ಯದಲ್ಲಿ ಇಸ್ಟೊನಿಯದ ರಾವುಲ್ ಮಸ್ಟ್‌ರನ್ನು ಎದುರಿಸಲಿದ್ದಾರೆ. ಕಶ್ಯಪ್ ಕಳೆದ ವಾರ ಡಚ್ ಓಪನ್‌ನಲ್ಲಿ ಮಸ್ಟ್ ವಿರುದ್ಧ ಸೋತಿದ್ದರು. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್‌ನ ಕಿಮ ಅಸ್ಟ್ರೂಪ್ ಹಾಗೂ ಆ್ಯಂಡ್ರೆಸ್ ಸ್ಕಾರೂಪ್‌ರನ್ನು ಎದುರಿಸಲಿದ್ದಾರೆ.







