ಶ್ರೀನಿವಾಸ ಪ್ರಸಾದ್ ವಾಸ್ತವವನ್ನು ಒಪ್ಪಿಕೊಳ್ಳಬೇಕಾದ ಸಂದರ್ಭ

ಅಧಿಕಾರ ಹೇಗೆ ಸಿದ್ಧಾಂತಗಳ ಬೆನ್ನುಹತ್ತಿದ ವ್ಯಕ್ತಿಯನ್ನು ಹಂತ ಹಂತವಾಗಿ ನಾಶ ಮಾಡಬಹುದು ಎನ್ನುವುದಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರನ್ನು ತಕ್ಷಣಕ್ಕೆ ಉಲ್ಲೇಖಿಸಬಹುದು. ಮುಂಬೈಯಲ್ಲಿ ಕಾರ್ಮಿಕ ಚಳವಳಿಯ ಮೂಲಕ ಗುರುತಿಸಲ್ಪಟ್ಟ, ಈ ನಾಯಕ ಎನ್‌ಡಿಎ ಸರಕಾರದ ಜೊತೆಗೆ ಅಧಿಕಾರದ ಸವಿಯನ್ನು ಸವಿಯುತ್ತ ನಿಧಾನಕ್ಕೆ ತನ್ನ ಸ್ವಂತಿಕೆಯನ್ನೇ ಬಿಜೆಪಿಗೆ ಬಿಟ್ಟು ಕೊಡುತ್ತ ಹೋದರು. ಎನ್‌ಡಿಎ ಸರಕಾರದೊಳಗೆ ತನ್ನದೇ ಆದ ಜಾಗವೊಂದನ್ನು ಅವರು ಸೃಷ್ಟಿ ಮಾಡುತ್ತಾರೆ ಎಂದು ಆದರ್ಶವಾದಿಗಳು ಭಾವಿಸಿದರೆ, ಅವರನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುತ್ತ ಹೋಯಿತು ಬಿಜೆಪಿ. ಆ ಸಂದರ್ಭದಲ್ಲಿ ತನಗೆ ಅಂಟಿಕೊಂಡಿರುವ ಕೋಮುವಾದಿ ಕಳಂಕದಿಂದ ಪಾರಾಗುವುದಕ್ಕೂ ಅದಕ್ಕೆ ಜಾರ್ಜ್ ಫೆರ್ನಾಂಡಿಸ್ ಬೇಕಾಗಿತ್ತು. ಅದಾಗಲೇ ತನ್ನ ಸುದೀರ್ಘ ಚಳವಳಿಯ ಫಲಿತಾಂಶ ಫಲಕೊಡದೇ ಹತಾಶರಾಗಿದ್ದ ಫೆರ್ನಾಂಡಿಸ್ ಅವರಿಗೆ ವಾಜಪೇಯಿಯವರ ಆಹ್ವಾನ ಅತ್ಯಂತ ಹಿತವಾಗಿ ಕಾಣಿಸಿತು. ಅಂತಿಮವಾಗಿ ಬಿಜೆಪಿ ಅವರನ್ನು ಸಂಪೂರ್ಣ ನುಂಗಿಹಾಕಿದ್ದು ಇತಿಹಾಸ. ಇದೇ ಜಾರ್ಜ್ ಫೆರ್ನಾಂಡಿಸ್‌ರ ನೆರಳಲ್ಲಿ ಓಡಾಡಿ, ಎನ್‌ಡಿಎ ಸರಕಾರದಲ್ಲಿ ಸಚಿವರಾಗಿ ಗುರುತಿಸಿಕೊಂಡಿದ್ದ ಸಜ್ಜನ, ಪ್ರಗತಿಪರ, ದಲಿತ ನಾಯಕ ಶ್ರೀನಿವಾಸ ಪ್ರಸಾದ್ ಇಂದು ಅಧಿಕಾರವಿಲ್ಲದೆ ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಿರುವುದನ್ನು ನೋಡಿದರೆ ಯಾಕೋ ಫೆರ್ನಾಂಡಿಸ್ ಮತ್ತೊಮ್ಮೆ ನೆನಪಾಗುತ್ತಾರೆ.
ಶ್ರೀನಿವಾಸ ಪ್ರಸಾದ್ ಅವರು ವೈಯಕ್ತಿಕವಾಗಿ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ನಾಯಕ. ಅಪ್ರಾಮಾಣಿಕರಲ್ಲ. ಹಾಗೆಯೇ ಒಂದಿಷ್ಟು ಪ್ರಗತಿಪರತೆಯನ್ನೂ ಮೈಗೂಡಿಸಿಕೊಂಡವರು. ಸಮತಾ ಪಕ್ಷದ ಮೂಲಕ ಕೇಂದ್ರದಲ್ಲಿ ಎನ್‌ಡಿಎ ಸರಕಾರದಲ್ಲಿ ಅಧಿಕಾರವನ್ನು ಪಡೆದುಕೊಂಡರು. ಯುಪಿಎ ಅವಧಿಯಲ್ಲಿ ಮತ್ತೆ ಜೆಡಿಎಸ್, ಕಾಂಗ್ರೆಸ್ ಎಂದು ಅತ್ತಿಂದಿತ್ತ ಓಲಾಡುತ್ತಲೇ ಸಿದ್ದರಾಮಯ್ಯ ಅವರ ಜೊತೆಗಿನ ಅಹಿಂದ ಮೂಲಕ ಕಾಂಗ್ರೆಸ್‌ನಲ್ಲಿ ಅಧಿಕಾರವನ್ನು ತನ್ನದಾಗಿಸುವಲ್ಲಿ ಯಶಸ್ವಿಯೂ ಆದರು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಅಗಾಧ ಜನಪ್ರಿಯತೆ ಶ್ರೀನಿವಾಸ ಪ್ರಸಾದ್ ಅವರಿಗೆ ಸುಲಭದಲ್ಲೇ ಸಚಿವ ಸ್ಥಾನವನ್ನೂ ನೀಡಿತು. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಬೇರೂರುತ್ತಿದ್ದ ಸಂದರ್ಭದಲ್ಲಿ ಶ್ರೀನಿವಾಸ ಪ್ರಸಾದ್, ಎಚ್. ವಿಶ್ವನಾಥ್‌ರಂತಹ ನಾಯಕರು ಅವರಿಗೆ ಜೊತೆ ನೀಡಿದ್ದು ನಿಜ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಅವರ ನಡುವೆ ಅದೇ ಸಂಬಂಧ ಬಹುಕಾಲ ಉಳಿಯಲಿಲ್ಲ ಎನ್ನುವುದೂ ಅಷ್ಟೇ ನಿಜ. ಆದರೆ ಶ್ರೀನಿವಾಸ ಪ್ರಸಾದ್ ಅವರಿಗೆ ಸಚಿವ ಸ್ಥಾನ ದಕ್ಕುವುದಕ್ಕೆ ಮುಖ್ಯ ಕಾರಣರಾದವರೇ ಸಿದ್ದರಾಮಯ್ಯ. ಅವರ ಆಪ್ತ ವಲಯದಲ್ಲಿದ್ದ ಕಾರಣಕ್ಕಾಗಿ ಸುಲಭದಲ್ಲಿ ಸಚಿವ ಸ್ಥಾನವನ್ನು ತನ್ನದಾಗಿಸಿಕೊಂಡವರು ಶ್ರೀನಿವಾಸ ಪ್ರಸಾದ್. ಅವರಿಗೆ ಸಿಕ್ಕಿರುವ ಖಾತೆಯೂ ಅಷ್ಟೇ ಮಹತ್ವಪೂರ್ಣವಾದುದು. ಕಂದಾಯ ಸಚಿವರಾಗಿ ರಾಜ್ಯಾದ್ಯಂತ ತನ್ನ ವರ್ಚಸ್ಸನ್ನು ವಿಸ್ತರಿಸಲು ಶ್ರೀನಿವಾಸ ಪ್ರಸಾದ್ ಅವರಿಗೆ ಅವಕಾಶಗಳಿದ್ದವು. ದಲಿತರು, ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಅವಕಾಶವೂ ವ್ಯಾಪಕವಾಗಿತ್ತು. ಆದರೆ ವಯಸ್ಸು ಅವರಿಗೆ ಸಹಕರಿಸುತ್ತಿರಲಿಲ್ಲ. ಜೊತೆಗೆ ದೈಹಿಕ ಆರೋಗ್ಯವೂ ಕೂಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿ ವರ್ಗ ಅಸಹಕಾರವನ್ನು ನೀಡುತ್ತಿತ್ತು. ಮಗದೊಂದೆಡೆ ಸಚಿವರೂ ಬೇರೆ ಬೇರೆ ಕಾರಣಗಳಿಗಾಗಿ ಪಕ್ಷದೊಳಗಿನ ಶಾಸಕರಿಂದಲೇ ಟೀಕೆಗಳಿಗೆ ಒಳಗಾಗುತ್ತಿದ್ದರು. ಎಲ್ಲ ಕೆಲಸಗಳನ್ನು ಸ್ವತಃ ಮುಖ್ಯಮಂತ್ರಿಯೇ ಬೀದಿಗಿಳಿದು ಮಾಡಬೇಕಾದಂತಹ ಸ್ಥಿತಿ ಸಹಜವಾಗಿಯೇ ಸಿದ್ದರಾಮಯ್ಯ ಅವರನ್ನು ಕೆರಳಿಸಿತ್ತು. ಈ ಸಂದರ್ಭವನ್ನು ಅವರ ಭಿನ್ನಮತೀಯ ರಾಜಕಾರಣಿಗಳು ಬಳಸಿಕೊಳ್ಳುವುದಕ್ಕೆ ಯತ್ನಿಸಿದರು. ದಿಲ್ಲಿ ವರಿಷ್ಠರಿಗೆ ದೂರುಗಳು ಹೋದವು. ಕೊನೆಗೆ ಮಹತ್ವದ ಖಾತೆಯನ್ನು ಸರಿಯಾಗಿ ನಿಭಾಯಿಸಲಾಗದ ಸಚಿವರನ್ನು ಹೊರಗೆ ಹಾಕಲೇಬೇಕಾದಂತಹ ಸನ್ನಿವೇಶ ಸಿದ್ದರಾಮಯ್ಯ ಅವರಿಗೆ ಎದುರಾಯಿತು. ಹಾಗೆ ನೋಡಿದರೆ, ಈ ಸಂದರ್ಭಕ್ಕೆ ಕೇವಲ ಸಿದ್ದರಾಮಯ್ಯ ಮಾತ್ರ ಹೊಣೆಯಲ್ಲ. ದಿಲ್ಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರೂ ಪರೋಕ್ಷವಾಗಿ ಹೊಣೆಯಾಗಿದ್ದಾರೆ. ಸಿದ್ದರಾಮಯ್ಯ ಒಬ್ಬರೇ ಶ್ರೀನಿವಾಸ ಪ್ರಸಾದ್ ಅವರನ್ನು ಉಳಿಸಿಕೊಳ್ಳುವ ಸ್ಥಿತಿಯಲ್ಲಂತೂ ಇದ್ದಿರಲಿಲ್ಲ. ಯಾಕೆಂದರೆ ಶ್ರೀನಿವಾಸ ಪ್ರಸಾದ್ ಕೂಡ, ತನ್ನ ಖಾತೆಯನ್ನು ಕಳೆದುಕೊಳ್ಳಲು ತಾನೇ ನೇರ ಕಾರಣವಾಗಿದ್ದರು. ಒಂದೆಡೆ ಬರದಂತಹ ಸನ್ನಿವೇಶ ನಿರ್ಮಾಣವಾಗಿದ್ದಾಗ, ರಾಜ್ಯಾದ್ಯಂತ ಪ್ರವಾಸಗೈಯಬೇಕಾಗಿದ್ದ ಶ್ರೀನಿವಾಸ ಪ್ರಸಾದ್ ಅಸೌಖ್ಯದಿಂದಾಗಿ ತನ್ನ ನಿವಾಸದೊಳಗೇ ಉಳಿದುಕೊಳ್ಳುವಂತಹ ಸನ್ನಿವೇಶ ಸರಕಾರಕ್ಕೆ ಮುಜುಗರ ತಂದಿತ್ತು. ಶ್ರೀನಿವಾಸ ಪ್ರಸಾದ್ ಖಾತೆ ಕಳೆದುಕೊಳ್ಳುವುದು ಎಲ್ಲರಿಗೂ ಖಚಿತವಾಗಿತ್ತು. ಆದರೆ ಈ ಬಗ್ಗೆ ತನ್ನೊಂದಿಗೆ ಮುಖ್ಯಮಂತ್ರಿ ಮಾತನಾಡಬೇಕಾಗಿತ್ತು ಎನ್ನುವುದು ಶ್ರೀನಿವಾಸ ಪ್ರಸಾದ್ ಅವರ ಅಂದಿನ ತಕರಾರು ಆಗಿತ್ತು. ಕೊನೆಗೂ ಇದೀಗ ಸಚಿವ ಸ್ಥಾನ ಕಳೆದುಕೊಂಡ ಶ್ರೀನಿವಾಸ ಪ್ರಸಾದ್ ತನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಅವರು ನೀಡಿರುವ ಹೇಳಿಕೆ, ವರ್ತನೆಗಳು ಮಾತ್ರ ಅವರ ವರ್ಚಸ್ಸಿಗೆ, ಅವರ ವ್ಯಕ್ತಿತ್ವಕ್ಕೆ ತಕ್ಕದ್ದಲ್ಲ. ದೇಶಾದ್ಯಂತ ದಲಿತರು, ದುರ್ಬಲ ವರ್ಗಗಳ ಜನರು ಅನ್ಯಾಯಕ್ಕೊಳಗಾಗುತ್ತಿರುವಾಗ ರಾಜ್ಯದಲ್ಲಿ ಸಂಘಪರಿವಾರದ ಜನರ ಉಪಟಳ ಮಿತಿಮೀರಿರುವ ಸಂದರ್ಭದಲ್ಲಿ ಶ್ರೀನಿವಾಸ ಪ್ರಸಾದ್ ಮಾತ್ರ ತನ್ನ ಮುಂದಿನ ಹೋರಾಟ ‘ಸಿದ್ದರಾಮಯ್ಯ ವಿರುದ್ಧ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಇಂತಹ ಹೇಳಿಕೆಯಿಂದ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಲಾಭವಾಗಬಹುದೇ ಹೊರತು ಶ್ರೀನಿವಾಸ ಪ್ರಸಾದ್ ಅವರಿಗೆ ಯಾವ ರಾಜಕೀಯ ಲಾಭಗಳೂ ಆಗಲಾರದು. ‘ಸಿದ್ದರಾಮಯ್ಯ’ರ ನೆಪವನ್ನು ಮುಂದಿಟ್ಟುಕೊಂಡು ಅವರು ಮತ್ತೆ ಬಿಜೆಪಿ ಸೇರಿದರೆ ಅವರ ಜನರೇ ಅವರನ್ನು ಕ್ಷಮಿಸಲಾರರು. ಮೊತ್ತಮೊದಲು ವಾಸ್ತವವನ್ನು ಶ್ರೀನಿವಾಸ ಪ್ರಸಾದ್ ಒಪ್ಪಿಕೊಳ್ಳಬೇಕಾಗಿದೆ. ರಾಜಕೀಯವೆಂದರೆ ಅಧಿಕಾರವೇ ಅಲ್ಲ. ಅಧಿಕಾರದಲ್ಲಿಲ್ಲದೆಯೂ ರಾಜಕೀಯ ಸಂಘಟನೆಗಳನ್ನು ಮಾಡಬಹುದು. ತಮ್ಮ ಸಮುದಾಯದ ಪರವಾಗಿ ಧ್ವನಿಯೆತ್ತಬಹುದು. ಈ ವಿಶ್ರಾಂತ ಅವಧಿಯಲ್ಲಿ ಶ್ರೀನಿವಾಸ ಪ್ರಸಾದ್ ಈ ಬಗ್ಗೆ ಗಮನ ಹರಿಸುವುದು ಅವರಿಗೂ ನಾಡಿಗೂ ಒಳಿತು.







