ಕೇದಾರ ಕಣಿವೆಯಲ್ಲಿ ಇನ್ನೂ ಮಾನವ ಅವಶೇಷ ಪತ್ತೆ; ಹೊಣೆ ನಾನಲ್ಲ: ರಾವತ್
ಡೆಹ್ರಾಡೂನ್, ಅ.17: ಕಳೆದ 2013ರ ಭೀಕರ ದುರಂತದ 3 ವರ್ಷಗಳ ಬಳಿಕ ಕೇದಾರ ಕಣಿವೆಯಲ್ಲಿ ಮಾನವ ಅವಶೇಷಗಳು ಪತ್ತೆಯಾಗು ತ್ತಿರುವ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಉತ್ತರಾ ಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಇಂದು ಪ್ರಯತ್ನಿಸಿದ್ದಾರೆ. ಅದಕ್ಕೆ, ಶೋಧ ಕಾರ್ಯಾಚರಣೆ ಕೊನೆಗೊಳಿಸುವಂತೆ ಆದೇಶ ನೀಡಿದ್ದ ಅವರ ಪೂರ್ವಾಧಿಕಾರಿ ವಿಜಯ್ ಬಹುಗುಣರೇ ಕಾರಣವೆಂದು ರಾವತ್ ಆರೋಪಿಸಿದ್ದಾರೆ.
ಸರಿಯಾಗಿ ಶೋಧ ಕಾರ್ಯ ನಡೆಸಲು ಸರಕಾರ ವಿಫಲವಾಗಿದೆಯೆಂದು ಮಾಡಿನ ಮೇಲೆ ನಿಂತು ಅರಚುವವರು ಶೋಧ ಕಾರ್ಯ ನಿಲ್ಲಿಸಿದ್ದ ಆಗಿನ ಮುಖ್ಯಮಂತ್ರಿಯನ್ನು ಪ್ರಶ್ನಿಸಬೇಕೇ ಹೊರತು ತನ್ನನ್ನಲ್ಲವೆಂದು ಅವರು ಯಾರದೇ ಹೆಸರೆತ್ತದೆ ಪತ್ರಕರ್ತರೊಡನೆ ಹೇಳಿದರು.
ರಾವತ್‌ರ ಪೂರ್ವಾಧಿಕಾರಿ ಬಹುಗುಣರ ಅಧಿಕಾರಾವಧಿಯಲ್ಲಿ ಮೊದಲ ಸುತ್ತಿನ ಶೋಧ ಕಾರ್ಯಾಚರಣೆ ಆರಂಭಿಸಿ ಮುಕ್ತಾಯ ಗೊಳಿಸಲಾಗಿತ್ತು. ಅವರೀಗ ಬಿಜೆಪಿಯಲ್ಲಿದ್ದಾರೆ.
ಭಾರೀ ನೆರೆಯಲ್ಲಿ ಕೊಚ್ಚಿಕೊಂಡು ಬಂದ ಲಕ್ಷಾಂತರ ಟನ್ ಅವಶೇಷಗಳಡಿ ಇನ್ನಷ್ಟು ಶವಗಳು ಉಳಿದಿರುವ ಸಾಧ್ಯತೆಯ ಕುರಿತು ಸ್ವಲ್ಪವೂ ಯೋಚಿಸದೆ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದುದು ವಿಚಿತ್ರವಾಗಿದೆಯೆಂದು ರಾವತ್ ಟೀಕಿಸಿದರು.





