ಕಳಚಿ ಬಿದ್ದ ಕೃತಕ ಮೇಕಪ್, ಮುರಿದು ಬಿತ್ತು ದಾಂಪತ್ಯ
ಮದುವೆಯಾಗಿ ಕೆಲವೇ ದಿನಗಳಲ್ಲಿ ಅರಬ್ ವಧುವನ್ನು ಮೇಕಪ್ ಇಲ್ಲದ ವೇಳೆ ನೋಡಿದ ಪತಿ ಆಕೆಗೆ ವಿಚ್ಛೇದನೆ ನೀಡಿದ್ದಾನೆ ಎಂದು ಈ ಮಹಿಳೆಗೆ ಕೌನ್ಸಲಿಂಗ್ ನೀಡಿದ ಮನಶ್ಶಾಸ್ತ್ರಜ್ಞರು ಹೇಳಿದ್ದಾರೆ. ಮಹಿಳೆಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಆದರೆ 36 ವರ್ಷದ ಅರಬ್ ವರ 28 ವರ್ಷದ ವಧುವಿಗೆ ವಿಚ್ಛೇದನೆ ನೀಡಿರುವುದಾಗಿ ವೈದ್ಯರು ಹೇಳಿದ್ದಾರೆ. ತನ್ನ ವಧು ಮದುವೆಗಿಂತ ಮೊದಲು ಕಾಣಿಸುತ್ತಿದ್ದಷ್ಟು ಸುಂದರವಾಗಿ ನಂತರ ಕಾಣಿಸುತ್ತಿರಲಿಲ್ಲ. ಹಲವು ಕಾಸ್ಮೆಟಿಕ್ಗಳು ಮತ್ತು ನಕಲಿ ಐಲ್ಯಾಷ್ಗಳಿಂದ ವಧು ತನ್ನನ್ನು ವಂಚಿಸಿದ್ದಾಳೆ ಎಂದು ವರ ದೂರಿದ್ದಾನೆ.
ಸಲಹಾ ಮನಶ್ಶಾಸ್ತ್ರಜ್ಞರಾಗಿರುವ ಡಾ ಅಬ್ದುಲ್ ಅಜೀಜ್ ಅಸಫ್ ಮಹಿಳೆಯ ಗುರುತು ಪರಿಚಯ ತಿಳಿಸದೆ ಪ್ರಕರಣದ ವಿವರ ನೀಡಿದ್ದಾರೆ. ವಿಚ್ಛೇದನೆ ನಂತರದ ನೋವನ್ನು ತಡೆದುಕೊಳ್ಳಲು ನೆರವಾಗಬೇಕು ಎಂದು ಮಹಿಳೆಯೊಬ್ಬರಿಂದ ವೈದ್ಯರಿಗೆ ಕರೆ ಬಂದಿತ್ತು. ಮಹಿಳೆ ಹೇಳಿರುವ ಪ್ರಕಾರ ವರ ಆಕೆಯನ್ನು ಅಲ್ ಮಾಮ್ಜರ್ ಕಡಲತೀರಕ್ಕೆ ಆರಾಮವಾಗಿ ಈಜಾಡಲು ಕರೆದುಕೊಂಡು ಹೋಗಿದ್ದ. ಆದರೆ ಹೀಗೆ ಹೋದಾಗ ಮಹಿಳೆಯ ಮುಖ ಒದ್ದೆಯಾಗಿ ಮೇಕಪ್ ಕಳಚಿ ಹೋಗಿತ್ತು. ಮೇಕಪ್ ಕಳಚಿ ಹೋದ ಮೇಲೆ ಪತಿ ತನ್ನ ಪತ್ನಿಯನ್ನು ಗುರುತಿಸಲೂ ಆಗಿರಲಿಲ್ಲ. ಆರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ದಂಪತಿ ಇತ್ತೀಚೆಗೆ ಮದುವೆಯಾಗಿದ್ದರು. ಪತಿಗೆ ಸತ್ಯ ಹೇಳುವ ಬಯಕೆ ಇದ್ದರೂ, ಅದಾಗಲೇ ತಡವಾಗಿ ಹೋಗಿತ್ತು ಎಂದು ನೊಂದುಕೊಂಡಿದ್ದಾರೆ ಮಹಿಳೆ. “ವರ ತಕ್ಷಣವೇ ಪತ್ನಿಗೆ ವಿಚ್ಛೇದನೆ ನೀಡಿದ್ದಾನೆ. ಮರಳಿ ಒಂದಾಗುವ ಪ್ರಶ್ನೆಯೇ ಇಲ್ಲ ಎಂದು ದೂರವಾಗಿದ್ದಾನೆ” ಎಂದು ಡಾ ಅಸಫ್ ಹೇಳಿದ್ದಾರೆ.