ಬಂಟ್ವಾಳ: ಮೇಯಲು ಹೋಗಿದ್ದ ಹಸುವನ್ನು ಬಲಿಪಡೆದ ‘ಸ್ಫೋಟಕ’

ಬಂಟ್ವಾಳ, ಅ.18: ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಇಟ್ಟಿದ್ದ ಸ್ಫೋಟಕ ವಸ್ತುವೊಂದು ಸ್ಫೋಟಗೊಂಡು ಹಸುವಿನ ಮುಖ ಛಿದ್ರವಾಗಿ ಚಿಕಿತ್ಸೆ ಪಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಕರೋಪಾಡಿ ಗ್ರಾಮದ ಚೆಲ್ಲಂಗಾರುವಿನಲ್ಲಿ ಮಂಗಳವಾರ ನಡೆದಿದೆ.
ಚೆಲ್ಲಂಗಾರು ನಿವಾಸಿ ರಾಧಾಕೃಷ್ಣ ಮೂಲ್ಯ ಅವರಿಗೆ ಸೇರಿದ 4ವರ್ಷ ಹಸು ನಿತ್ಯ ಗುಡ್ಡಕ್ಕೆ ತೆರಳಿ ಹಸಿ ಹುಲ್ಲು ಮೇದು ಹೊಟ್ಟೆ ತುಂಬಿಸಿಕೊಂಡು ಮನೆಗೆ ಹಿಂತಿರುಗುತ್ತಿತ್ತು. ಸೋಮವಾರ ಬೆಳಗ್ಗೆ ಚೆಲ್ಲಂಗಾರು ಗುಡ್ಡಕ್ಕೆ ತೆರಳಿದ ದನ ಸಂಜೆಯಾದರೂ ಹಿಂತಿರುಗದ ಹಿನ್ನಲೆಯಲ್ಲಿ ರಾಧಾಕೃಷ್ಣ ಹಾಗೂ ಅವರ ತಾಯಿ ಅಪ್ಪಿ ಹುಡುಕಾಡುವ ಸಂದರ್ಭ ಮರದ ಕೆಳಗೆ ಮುಖ ಛಿದ್ರವಾಗಿ ರಕ್ತ ಇಳಿಸುತ್ತಾ ಹಸು ನಿಂತುಕೊಂಡಿತ್ತು ಎನ್ನಲಾಗಿದೆ.
ತಕ್ಷಣ ಮನೆಯವರ ಸಹಾಯದೊಂದಿಗೆ ಗುಡ್ಡದಿಂದ ಮನೆಗೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ನೀಡುವ ಪ್ರಯತ್ನವನ್ನೂ ಮಾಡಲಾಯಿತಾದರೂ ಕತ್ತು ಹಾಗೂ ಬಾಯಿಯ ಭಾ ಸಿಡಿದು ಸುಟ್ಟುಹೋದ ಹಿನ್ನೆಲೆಯಲ್ಲಿ ತೀವ್ರ ರಕ್ತ ಸ್ರಾವದಿಂದ ಹಸು ಮುಂಜಾನೆ 3 ಗಂಟೆ ಸುಮಾರಿಗೆ ಅಸುನೀಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ವಿಟ್ಲ ಠಾಣೆಯ ಪೊಲೀಸ್ ಸಹಾಯಕ ಉಪನಿರೀಕ್ಷಕ ಆನಂದ ಪೂಜಾರಿ, ಸಿಬ್ಬಂದಿ ರಾಮಚಂದ್ರ, ರಮೇಶ, ಜಯಕುಮಾರ್, ಪ್ರವೀಣ್ ರೈ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡ್ಯನಡ್ಕ ಪಶು ವೈದ್ಯ ಪರಮೇಶ್ವರ ನಾಯ್ಕ ಶವ ಪರೀಕ್ಷೆ ನಡೆಸಿ, ಕೆಲವು ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಲಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ವಿಟ್ಲ ಬಜರಂಗದಳದ ಮುಖಂಡ ಜಯಂತ ಸಿ.ಎಚ್., ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಮತ್ತಿತರರು ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸೂಕ್ತ ಪರಿಹಾರ ಕೊಡಿಸುವಂತೆ ಆಗ್ರಹಿಸಿದ್ದಾರೆ.







