ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ತಿರಸ್ಕರಿಸಿಲ್ಲ: ಕೆ.ಬಿ.ಕೋಳಿವಾಡ

ಬೆಂಗಳೂರು, ಅ.18: ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ತಾನು ಅಂಗೀಕರಿಸಲೂ ಇಲ್ಲ, ನಿರಾಕರಣೆಯೂ ಮಾಡಿಲ್ಲ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್‌ಪ್ರಸಾದ್ ಸ್ವತಃ ಅವರೇ ಬಂದು ರಾಜೀನಾಮೆ ಸಲ್ಲಿಸಿದ್ದಾರೆ. ನಿಯಮಾನುಸಾರ ತಾನು ಅದನ್ನು ಸ್ವೀಕರಿಸಿದ್ದೇನೆ. ರಾಜೀನಾಮೆಯನ್ನು ಅಂಗೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬುದರ ಕುರಿತು ಸಕಾಲದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಶ್ರೀನಿವಾಸ್‌ಪ್ರಸಾದ್ ರಾಜೀನಾಮೆಯನ್ನು ತಾನು ತಿರಸ್ಕರಿಸಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳು ಆಧಾರ ರಹಿತವಾದದ್ದು. ಸ್ವತಃ ಅವರೇ ಬಂದು ರಾಜೀನಾಮೆ ನೀಡಿರುವುದರಿಂದ ಅದನ್ನು ಸ್ವೀಕರಿಸಲಾಗಿದೆ. ರಾಜೀನಾಮೆ ಅಂಗೀಕಾರಕ್ಕೆ ಕೆಲವು ನಿಯಮಾವಳಿಗಳನ್ನು ಪಾಲನೆ ಮಾಡಬೇಕಿದೆ ಎಂದು ಅವರು ತಿಳಿಸಿದರು.
ಶಾಸಕ ಸ್ಥಾನಕ್ಕೆ ನೀಡುವ ರಾಜೀನಾಮೆಯನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ. ಶ್ರೀನಿವಾಸ್ ಅವರಿಂದ ರಾಜೀನಾಮೆಯನ್ನು ಸ್ವೀಕರಿಸಿದ್ದೇನೆ. ಅದನ್ನು ಅಂಗೀಕರಿಸಲು ನಿರ್ದಿಷ್ಟ ಸಮಯವನ್ನು ನಿಗದಿ ಮಾಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.
ಭಿನ್ನಮತೀಯ ಶಾಸಕರಿಗೆ ಕಾಲಾವಕಾಶ: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ನೀಡಿರುವ ಎಂಟು ಮಂದಿ ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ದೂರಿಗೆ ಆಕ್ಷೇಪಣೆ ಸಲ್ಲಿಸಲು ಸ್ಪೀಕರ್ ಕೆ.ಬಿ.ಕೋಳಿವಾಡ, ಎಂಟು ಶಾಸಕರಿಗೆ ಕಾಲಾವಕಾಶವನ್ನು ನೀಡಿದ್ದಾರೆ.
ಜೆಡಿಎಸ್ ಪಕ್ಷದಿಂದ ಅಮಾನತ್ತುಗೊಂಡಿರುವ ಎಂಟು ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಸಲ್ಲಿಕೆಯಾಗಿರುವ ದೂರಿನ ಕುರಿತು ಸ್ಪೀಕರ್ ಅಧ್ಯಕ್ಷತೆಯ ಅರೆ ನ್ಯಾಯಿಕಪ್ರಾಧಿಕಾರ ಇಂದು ವಿಚಾರಣೆ ನಡೆಸಿತು. ಆದರೆ, ಇಂದಿನ ವಿಚಾರಣೆಗೆ ಎಂಟು ಮಂದಿ ಶಾಸಕರು ಗೈರು ಹಾಜರಾಗಿದ್ದರು.
ದೂರು ಸಲ್ಲಿಕೆಯಾಗಿರುವ ಕುರಿತು ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿ ವಕೀಲರು ಸ್ಪೀಕರ್ ಬಳಿ ಕಾಲಾವಕಾಶ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ಪದೇ ಪದೇ ಕಾಲಾವಕಾಶವನ್ನು ನೀಡಲು ಸಾಧ್ಯವಿಲ್ಲ. ಇದು ನಿಮಗೆ ನೀಡುತ್ತಿರುವ ಕೊನೆಯ ಅವಕಾಶವಾಗಿದೆ ಎಂದು ಎಚ್ಚರಿಕೆ ನೀಡಿ, ವಿಚಾರಣೆಯನ್ನು ಅ.27ಕ್ಕೆ ಮುಂದೂಡಿದರು.
ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್ ಪಕ್ಷ ಜಾರಿಗೊಳಿಸಿದ್ದ ವಿಪ್ ಉಲ್ಲಂಘಿಸಿ, ಶಾಸಕರಾದ ಝಮೀರ್‌ಅಹ್ಮದ್‌ಖಾನ್, ಚಲುವರಾಯಸ್ವಾಮಿ, ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಎಂಟು ಮಂದಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದರು.
ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಎಂಟು ಮಂದಿ ಶಾಸಕರನ್ನು ಪಕ್ಷದಿಂದ ಅಮಾನತ್ತುಗೊಳಿಸಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆದೇಶ ಹೊರಡಿಸಿದ್ದರು. ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸುವಂತೆ ಕೋರಿ ಜೆಡಿಎಸ್ ಶಾಸಕರು ಸ್ಪೀಕರ್‌ಗೆ ದೂರು ಸಲ್ಲಿಸಿದ್ದರು.







