ಕೃಷಿಕ, ರಂಗನಟ ಸುಭಾಶ್ಚಂದ್ರ ಪಡಿವಾಳ್ ನಿಧನ

ಮೂಡುಬಿದಿರೆ, ಅ.18: ಕೃಷಿಕ, ಪ್ರಸಿದ್ಧ ತುಳು ಚಲನಚಿತ್ರ ಕೋಟಿ-ಚೆನ್ನಯದ ಕೋಟಿ ಪಾತ್ರ ಖ್ಯಾತಿಯ ರಂಗನಟ, ನಿರ್ದೇಶಕ ಕೃಷಿಕ ಕಲ್ಲಮುಂಡ್ಕೂರು ಮಾಲ್ದಬೆಟ್ಟು ಸುಭಾಶ್ಚಂದ್ರ ಪಡಿವಾಳ್ (72) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ತುಳು ಚಲನಚಿತ್ರಗಳಾದ ಕೋಟಿ ಚೆನ್ನಯ, ಯೇರ್ ಮಲ್ತಿ ತಪ್ಪುಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಪ್ರಾದೇಶಿಕ ಚಲನಚಿತ್ರ ಸುದ್ಧದಲ್ಲಿಯೂ ಅವರು ಅಭಿನಯಿಸಿದ್ದರು. ಚಾರಿತ್ರಿಕ ನಾಟಕಗಳಾದ ಸಾಮ್ರಾಟ್ ಶಹಜಹಾನ್, ಸಾಮ್ರಾಟ್ ಅಶೋಕ್, ಸಾಮ್ರಾಟ್ ಚಂದ್ರಗುಪ್ತ, ಅಂಗುಲಿಮಾಲಾ ಕಲಿಕಂಠೀರವ, ಸಾಮಾಜಿಕ ನಾಟಕಗಳಾದ ಬೈರನ ಬದ್‌ಕ್, ಬೈಯಮಲ್ಲಿಗೆ, ಕರಿಮಣಿ ಕಟ್ಟಂದಿನ ಕಂಡನ್ಯೆ, ಮೇರ್ ಮಲ್ತಿನ ತಪ್ಪು, ಸಾವಿತ್ರಿ, ಕಾವೇರಿ, ಮೋಕೆದ ಮೆಗ್ಯೆ, ಚೆನ್ನೆತೆಲಿಪುನಗ ಮುಂತಾದ ಸುಮಾರು 50ಕ್ಕೂ ಹೆಚ್ಚು ನಾಟಕಗಳಲ್ಲಿ ನಿರ್ದೇಶಿಸಿ ನಟಿಸಿದ್ದರು.
ಹಲವು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಅವರು ಕಲ್ಲಮುಂಡ್ಕೂರು ದೈಲಬೆಟ್ಟು ಅಬ್ಬಗದಾರಗ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಲ್ಲಮೂಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ಸಂಚಾಲಕರಾಗಿ ಮಹಾವೀರ ಕಾಲೇಜು ಟ್ರಸ್ಟ್‌ನ ಸದಸ್ಯರಾಗಿದ್ದರು. ದ.ಕ.ಜಿಲ್ಲಾ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಕಲ್ಲಮುಂಡ್ಕೂರು ಬ್ರಹ್ಮಬೈದರ್ಕಳ ಗರಡಿಯ ಗೌರವಾಧ್ಯಕ್ಷರಾಗಿ, ಮೂಡುಬಿದಿರೆ ತುಳು ಕೂಟದ ಅಧ್ಯಕ್ಷರಾಗಿ, ಕಲ್ಪಸಿರಿ ಶಟ್ಲ್ ಕ್ಲಬ್, ಸರ್ವೋದಯ ಯುವಕ ಮಂಡಲ, ಅಭಿನಯ ಕಲಾವೃಂದದ ಗೌರವಾಧ್ಯಕ್ಷರಾಗಿದ್ದರು.
ಶಾಸಕ ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಸಂಪತ್ ಸಾಮ್ರಾಜ್ಯ, ಜೀವಂಧರ ಬಲ್ಲಾಳ್, ರೋಹಿತ್ ಕುಮಾರ್ ಕಟೀಲು ಸಹಿತ ಅನೇಕ ಗಣ್ಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.
ಮೃತರ ಗೌರವಾರ್ಥ ಮಂಗಳವಾರ ಕಲ್ಲಮುಂಡ್ಕೂರಿನಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು.







