ಲಿಷಾಗೆ ಮೂರು ತಿಂಗಳಲ್ಲಿ ಸರಕಾರಿ ಉದ್ಯೋಗ ನೀಡಿ : ಹೈಕೋರ್ಟ್
ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ

ಬೆಂಗಳೂರು, ಅ.18: ಮಲ್ಲೇಶ್ವರಂ ಬಾಂಬ್ ಸ್ಫೋಟ್ ಪ್ರಕರಣದಲ್ಲಿ ಗಾಯಗೊಂಡ ಲಿಷಾಗೆ ಮೂರು ತಿಂಗಳಿನಲ್ಲಿ ಸರಕಾರಿ ಉದ್ಯೋಗ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಭಯೋತ್ಪಾದನಾ ಕೃತ್ಯಗಳಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ದಿಸೆಯಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು ಹಾಗೂ ನನಗೆ 1 ಕೋಟಿ ಪರಿಹಾರ ನೀಡಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಲಿಷಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠವು ವಿಲೇವಾರಿ ಮಾಡಿದೆ.
ಆದೇಶದ ವಿವರ: ಘಟನೆಗೆ ಗುಪ್ತಚರ ವಿಭಾಗದ ವೈಫಲ್ಯ ಕಾರಣ ಎಂಬ ಅರ್ಜಿದಾರರ ಆರೋಪವನ್ನು ಕುರುಡಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಘಟನೆಯಲ್ಲಿ ಲಿಷಾ ಶೇಕಡ 50ಕ್ಕೂ ಹೆಚ್ಚು ಪ್ರಮಾಣದ ಅಂಗವಿಕಲತೆಗೆ ಒಳಗಾಗಿದ್ದಾಳೆ ಮತ್ತು ಇದು ಈಕೆಯ ಭವಿಷ್ಯಕ್ಕೆ ಭಾರಿ ಪೆಟ್ಟು ನೀಡಿದೆ. ಹೀಗಾಗಿ, ಕೇಂದ್ರ ಸರಕಾರ ಪರಿಹಾರದ ಮೊತ್ತವನ್ನು ಅತ್ಯಂತ ವಿವೇಚನೆಯಿಂದ ನಿರ್ಧರಿಸಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ಭಯೋತ್ಪಾದಕರ ದಾಳಿಗೆ ತುತ್ತಾಗುವ ಜನರಿಗೆ ವಿಶ್ವದ ಇತರೆ ರಾಷ್ಟ್ರಗಳಲ್ಲಿ ಯಾವ ರೀತಿ ಪರಿಹಾರ ನೀಡಲಾಗುತ್ತಿದೆ ಎಂಬುದನ್ನು ಅವಲೋಕಿಸಬೇಕು. ಈ ನಿಟ್ಟಿನಲ್ಲಿ ಅಮೆರಿಕ 2012ರಲ್ಲಿ ಅಳವಡಿಸಿಕೊಂಡ ನೀತಿಗಳನ್ನು ಕೇಂದ್ರ ಸರಕಾರ ಗಮನಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಭಯೋತ್ಪಾದಕರ ಕೃತ್ಯಗಳಿಗೆ ತುತ್ತಾದವರಿಗೆ ಅಮೆರಿಕ ರೂಪಿಸಿರುವ ಕಾನೂನು ನಮಗೆ ಮಾರ್ಗದರ್ಶಿಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ದಿಸೆಯಲ್ಲಿ ರೂಪಿಸಿರುವ ರಾಷ್ಟ್ರೀಯ ನೀತಿಯ ಕೆಲವು ಸಾಲುಗಳನ್ನೂ ಉದ್ಧರಿಸಲಾಗಿದೆ. ಗಾಯಾಳುಗಳಿಗೆ ನೀಡಲಾಗುವ ಪರಿಹಾರದ ಮೊತ್ತ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಅಷ್ಟಕ್ಕೂ ನಿಮಗಾಗಿರುವ ನಷ್ಟವನ್ನು ನಾವು ಯಾವುದೇ ರೀತಿಯಲ್ಲೂ ಭರ್ತಿ ಮಾಡಲು ಸಾಧ್ಯವಿಲ್ಲ. ನಮ್ಮ ಈ ಪರಿಹಾರ ನೀಡಿಕೆಯು, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಂತ್ರಸ್ತರಾದವರಿಗೆ ಸಮಾಜ ಪ್ರತಿಕ್ರಿಯಿಸುವ ಒಂದು ಸೂಕ್ಷ್ಮ ವಿಧಾನವಷ್ಟೇ.







