ಕಟಪಾಡಿಯಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಬಿಜೆಪಿ ಆಗ್ರಹ

ಕಾಪು, ಅ.18: ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಟಪಾಡಿಯಲ್ಲಿ ಜನರು, ವಾಹನ ಸವಾರರು ಅನುಭವಿಸುತ್ತಿರುವ ತೊಂದರೆ ನಿವಾರಿಸಲು ಅಂಡರ್‌ಪಾಸ್ ಹಾಗೂ ಸಬ್‌ವೇ ನಿರ್ಮಿಸಬೇಕೆಂದು ಕಟಪಾಡಿ ಬಿಜೆಪಿ ಸ್ಥಾನೀಯ ಸಮಿತಿಯ ವತಿಯಿಂದ ಬಿಜೆಪಿ ಹಿರಿಯ ಮುಂದಾಳು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿಯವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ದಿನನಿತ್ಯ ಕಟಪಾಡಿ ಬೈಪಾಸ್‌ನಲ್ಲಿ ಅವಘಡಗಳು ನಡೆಯುತ್ತಲೇ ಇದೆ. ಪೊಲೀಸ್ ಇಲಾಖೆ, ಗೃಹರಕ್ಷಕ ದಳದ ಸಿಬ್ಬಂದಿ ರಾತ್ರಿ ಹಗಲು ನಿರಂತರವಾಗಿ ಪಹರೆ ನಡೆಸುತ್ತಿದ್ದರೂ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ ಮಾತ್ರವಲ್ಲ ಕಟಪಾಡಿ ಬೈಪಾಸ್‌ನಿಂದ ದಕ್ಷಿಣಕ್ಕೆ ಪಾಂಗಾಳ ಸೇತುವೆಯವರೆಗೆ ಮತ್ತು ಉತ್ತರಕ್ಕೆ ಉದ್ಯಾವರ ಸೇತುವೆಯವರೆಗೆ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳ ನಿರ್ಮಾಣ ಮಾಡಬೇಕು ಮತ್ತು ಕಟಪಾಡಿ ಪೇಟೆಭಾಗದಲ್ಲಿ ಈಗಾಗಲೇ ನಿರ್ಮಿಸಿದ ಸರ್ವಿಸ್ ರಸ್ತೆಗಳನ್ನು ಇನ್ನಷ್ಟು ಅಗಲಗೊಳಿಸಿ ಜನರಿಗೆ ನಡೆದಾಡಲು ಅನುಕೂಲ ಕಲ್ಪಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಬೇಡಿಕೆಗೆ ಸಕಾಲದಲ್ಲಿ ಸ್ಪಂದನೆ ಸಿಗದಿದ್ದರೆ ಕಟಪಾಡಿಯ ಸೇವಾ ಸಂಘ ಸಂಸ್ಥೆಗಳು ಮತ್ತು ಜನರ ಸಹಕಾರದೊಂದಿಗೆ ಹೋರಾಟ ನಡೆಸುವುದಾಗಿಯೂ ಬಿಜೆಪಿ ಕಟಪಾಡಿ ಸ್ಥಾನೀಯ ಸಮಿತಿ ಮನವಿಯಲ್ಲಿ ತಿಳಿಸಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಎಂ ಸುವರ್ಣ, ಶಿಲ್ಪಾ ಜಿ. ಸುವರ್ಣ, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಪೈ, ಬಿಜೆಪಿ ಕಟಪಾಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಕಮಾಲಾಕ್ಷ ಸುವರ್ಣ, ಪ್ರಧಾನ ಕಾರ್ಯದರ್ಶಿ ನಿತಿನ್ ವಿ. ಶೇರಿಗಾರ್, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಪೂಜಾರಿ, ಗ್ರಾ.ಪಂ ಸದಸ್ಯರಾದ ಸುಭಾಶ್ ಬಲ್ಲಾಳ್, ಪವಿತ್ರ ಶೆಟ್ಟಿ, ವೀಣಾ ಶೆಟ್ಟಿ, ಪ್ರಮುಖರಾದ ಕೆ. ಶ್ರೀನಿವಾಸ ಕಿಣಿ, ಸರೋಜಿನಿ ಶೆಟ್ಟಿ, ಅಬ್ದುಲ್ ಸಲೀಂ, ಶಂಕರ, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.







