ರಾಷ್ಟ್ರೀಯ ಎಸ್ಸಿ/ಎಸ್ಟಿ ಕೇಂದ್ರಕ್ಕೆ ಮೋದಿ ಚಾಲನೆ
ಲೂಧಿಯಾನ, ಅ.18: ಎಸ್ಸಿ/ಎಸ್ಟಿ ಸಮುದಾಯದ ಉದ್ಯಮಿಗಳಿಗೆ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ರಾಷ್ಟ್ರೀಯ ಎಸ್ಸಿ/ಎಸ್ಟಿ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಚಾಲನೆ ನೀಡಿದರು. 490 ಕೋಟಿ ರೂ. ಆರಂಭಿಕ ನಿಧಿಯೊಂದಿಗೆ ಆರಂಭವಾಗಿರುವ ಈ ಕೇಂದ್ರವು ಮಾರುಕಟ್ಟೆ ಅವಕಾಶ, ಮೇಲ್ವಿಚಾರಣೆ, ಸಾಮರ್ಥ್ಯ ವರ್ಧನೆ, ಆರ್ಥಿಕ ನೆರವು ಯೋಜನೆಯ ಪ್ರಯೋಜನ ಪಡೆಯುವುದು, ಉದ್ಯಮ ವ್ಯವಹಾರದ ಜ್ಞಾನ ಹಂಚಿಕೊಳ್ಳುವಿಕೆ ಮುಂತಾದ ಕ್ಷೇತ್ರಗಳನ್ನು ಬಲಪಡಿಸುವತ್ತ ಗಮನ ನೀಡಲಿದೆ. ಅಲ್ಲದೆ ಸರಕಾರ ನಿಗದಿಪಡಿಸಿದ ಸಂಗ್ರಹಣ ಗುರಿಯನ್ನು ಸಾಧಿಸಲು ಕೇಂದ್ರದ ಸಾರ್ವಜನಿಕ ರಂಗದ ಉದ್ಯಮಗಳಿಗೆ ನೆರವಾಗಲಿದೆ. ಸಾರ್ವಜನಿಕ ಸಂಗ್ರಹಣ ಕಾಯ್ದೆ 2012ರ ಪ್ರಕಾರ ಸಚಿವಾಲಯಗಳು, ಇಲಾಖೆಗಳು ಮತ್ತು ಕೇಂದ್ರದ ಸಾರ್ವಜನಿಕ ರಂಗದ ಉದ್ಯಮಗಳು ತಮ್ಮ ಸಂಗ್ರಹ ನಿಧಿಯ ಶೇ.4ರಷ್ಟನ್ನು ಎಸ್ಸಿ/ಎಸ್ಟಿ ಮಾಲಕತ್ವದ ಉದ್ಯಮಗಳಿಂದ ಪಡೆಯಬೇಕಿದೆ. ಇದೇ ಸಂದರ್ಭದಲ್ಲಿ ಪ್ರಧಾನಿಯವರು ಝೀರೋ ಡಿಫೆಕ್ಟ್, ಝೀರೋ ಎಫೆಕ್ಟ್ (ಝಡ್‌ಇಡಿ) ಯೋಜನೆಗೆ ಚಾಲನೆ ನೀಡಿದರು. ಅಲ್ಲದೆ ಮಹಿಳೆಯರಿಗೆ ಚರಕಗಳನ್ನು ವಿತರಿಸಲಾಯಿತು ಮತ್ತು ಅತ್ಯುತ್ತಮ ನಿರ್ವಹಣೆ ತೋರಿದ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. 2014ರಲ್ಲಿ ಸ್ವಾತಂತ್ರೋತ್ಸವ ಸಂದರ್ಭದ ಭಾಷಣದಲ್ಲಿ ಝೆಡ್ ಯೋಜನೆಯ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖಿಸಿದ್ದರು.





